ಜೆಡಿಎಸ್ ತೊರೆದಿದ್ದ ಹಿರಿ ತಲೆಗಳು ಮತ್ತೆ ತೆನೆ ಹೊರಲು ಸಿದ್ಧ

ಜೆಡಿಎಸ್ ತೊರೆದಿದ್ದ ಹಿರಿ ತಲೆಗಳು ಮತ್ತೆ ತೆನೆ ಹೊರಲು ಸಜ್ಜಾಗುತ್ತಿರುವ ಸುದ್ದಿ ತೂರಿ ಬಂದಿದೆ. ಜನತಾ ಪರಿವಾರ ತೊರೆದು ಬಿಜೆಪಿ, ಕಾಂಗ್ರೆಸ್ ಸೇರಿ ಆಯಕಟ್ಟಿನ ಜಾಗಗಳಲ್ಲಿ ನೆಲೆಸಿರುವ ಉತ್ತರ ಕರ್ನಾಟಕದ ಪ್ರಭಾವಿ ನಾಯಕರುಗಳು ಈಗ ಮತ್ತೊಮ್ಮೆ ಜೆಡಿಎಸ್ ನತ್ತ ಮುಖ ಮಾಡಿರುವ ಸುದ್ದಿ ಬಂದಿದೆ. ಪಟ್ಟಿಯಲ್ಲಿ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಅಜಯ್ ಕುಮಾರ್ ಸರ್ ನಾಯ್ಕ ಅಲ್ಲದೇ ಎಂ.ಬಿ. ಪಾಟೀಲ್ ಸೇರಿದಂತೆ ಹಲವು ಮುಖಂಡರನ್ನು ಪಕ್ಷಕ್ಕೆ ಸೆಳೆಯಲು ಜೆಡಿಎಸ್ ಮುಂದಾಗಿದೆ.
ಉತ್ತರಕರ್ನಾಟಕದಲ್ಲಿ 50 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಜೆಡಿಎಸ್ ಹೊಂದಿದ್ದಾರೆ. ಆ ಭಾಗದ ಪ್ರಭಾವಿ ಹಾಗೂ ವರ್ಚಸ್ವಿ ಮುಖಂಡರನ್ನು ಸೆಳೆಯಲು ಮಾತುಕತೆ ನಡೆಸಿದೆ. ಆ ಭಾಗದಿಂದಲೇ ಮಿಷನ್-50 ಎಂದು ಕಾರ್ಯಾಚರಣೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರೇ ನೇತೃತ್ವ ವಹಿಸಿದ್ದಾರೆ. ಈಗಾಗಲೇ ಈ ಮುಖಂಡರೂ ಸೇರಿದಂತೆ ಕೆಲವು ಪ್ರಭಾವಿಗಳ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.ದೇವೇಗೌಡರು ಮಾತುಕತೆ ನಂತರ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳಲು ಬೆಳಗಾವಿಯಲ್ಲಿ ಬಿಡಾರ ಬಿಟ್ಟಿದ್ದ ಪಕ್ಷದ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕತ್ತಿ, ಜಾರಕಿಹೊಳಿ ಸೇರಿದಂತೆ ಹಲವು ಮುಖಂಡರ ಜೊತೆ ಸಮಾಲೋಚನೆ ಮಾಡಿ, ಅವರ ಮನ ಓಲೈಸಿದ್ದಾರೆ.ಮಾತುಕತೆ ಸಂದರ್ಭದಲ್ಲಿ ಜೆಡಿಎಸ್ ಸೇರಲು ತಾತ್ವಿಕ ಒಪ್ಪಿಗೆ ನೀಡಿದ್ದರೂ, ಜನವರಿಯಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ ಎಂಬ ಸುದ್ದಿ ತಿಳಿದು ಬಂದಿದೆ.
ರಾಜ್ಯ ಹಾಗೂ ರಾಷ್ಟ್ರದ ಬಿಜೆಪಿ ವರಿಷ್ಠರು ಕಡೆಗಣಿಸುತ್ತಿದ್ದಾರೆ ಎಂದು ಅಸಮಾಧಾನಗೊಂಡಿರುವ ಕತ್ತಿ, ಜಾರಕಿಹೊಳಿ ಪಕ್ಷದಿಂದ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ. ಇದರ ಜೊತೆಗೆ ಅವರ ಬೆಂಬಲಿಗರು, ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ರಾಜಕೀಯ ನಿರ್ಣಯ ಕೈಗೊಳ್ಳಲು ತಿಳಿಸಿರುವುದನ್ನು ಅರಿತ ದೇವೇಗೌಡರು, ಮತ್ತೆ ಅವರನ್ನು ಪಕ್ಷಕ್ಕೆ ಕರೆತರಲು ವೇದಿಕೆ ಸಿದ್ಧಪಡಿಸಿದ್ದಾರೆ.
ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಬೆಳಗಾವಿ, ಚಿಕ್ಕೋಡಿ ಜಿಲ್ಲಾ ನಾಯಕತ್ವ ನೀಡುವುದು, ಅಜಯಕುಮಾರ ಸರ್ ನಾಯಕ ಅವರಿಗೆ ಬಾಗಲಕೋಟೆ, ಈಗಾಗಲೇ ಪಕ್ಷಕ್ಕೆ ಬಂದಿರುವ ಕಾಂಗ್ರೆಸ್‍ನ ಎಸ್.ಎಸ್. ಪಾಟೀಲ್ ನಡಹಳ್ಳಿ ಅವರಿಗೆ ವಿಜಾಪುರ ಜಿಲ್ಲಾ ನಾಯಕತ್ವ ನೀಡುವುದರ ಮೂಲಕ ಹೆಚ್ಚು ಸ್ಥಾನ ಗಳಿಸುವುದು ಗೌಡರ ಉದ್ದೇಶ.ಇನ್ನು ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಹೊಣೆಗಾರಿಕೆಯನ್ನು ವಿಧಾನಪರಿಷತ್ ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ ಅವರ ಹೆಗಲಿಗೆ ಹಾಕಲಾಗಿದೆ.
Comments