ಸಿದ್ದರಾಮಯ್ಯ ರನ್ನು ಸಿಎಂ ಮಾಡುವಂತೆ ಸೋನಿಯಾ ಮನೆಗೆ ಹೋಗಿದ್ದೆ : ದೇವೇಗೌಡ್ರು

ಸಿದ್ದರಾಮಯ್ಯನನ್ನು ಮುಖ್ಯಮಂತ್ರಿ ಮಾಡಿ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಮನೆಗೆ ಐದು ಬಾರಿ ಹೋಗಿ ಮನವೋಲಿಸಿದ್ದೇನೆ. ಕಾಲು ಹಿಡಿಯುವುದೊಂದು ಬಾಕಿಯಿತ್ತು. ಸಿದ್ದರಾಮಯ್ಯ ಅವರ ವ್ಯವಹಾರ ಗೊತ್ತಿದ್ದ ಸೋನಿಯಾಗಾಂಧಿ ಸುತರಾಂ ಒಪ್ಪಲಿಲ್ಲ. ಇದಕ್ಕೆ ಪಿ.ಜಿ.ಆರ್.ಸಿಂಧ್ಯಾ ಮತ್ತು ಎಂ.ಪಿ.ಪ್ರಕಾಶ್ ಅವರೇ ಸಾಕ್ಷಿ. ನಮ್ಮಿಂದ ಇಷ್ಟೆಲ್ಲಾ ಅನುಕೂಲ ಪಡೆದಿರುವ ಸಿದ್ದರಾಮಯ್ಯನಿಗೆ ಜೀವನದಲ್ಲಿ ದೈವಶಕ್ತಿಯ ಮೇಲೆ ನಂಬಿಕೆಯಿದ್ದರೆ ಮುಂದೆ ಬಂದು ಹೇಳಲಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪಂಥಾಹ್ವಾನ ನೀಡಿದರು.
ಕಳೆದ 1996ರಲ್ಲಿ ಮುಖ್ಯಮಂತ್ರಿಯಾಗುವುದನ್ನು ದೇವೇಗೌಡರೇ ತಪ್ಪಿಸಿದರೆಂದು ಹೇಳುತ್ತಿರುವ ಸಿದ್ದರಾಮಯ್ಯ ಹಿಂದಿನದನ್ನು ನೆನಪಿಸಿಕೊಳ್ಳಬೇಕು. ದೇವೇಗೌಡ ಯಾರಿಗೂ ದ್ರೋಹ, ಅನ್ಯಾಯ ಮಾಡಿಲ್ಲ. ಸಿದ್ದರಾಮಯ್ಯನನ್ನು ತಲೆಮೇಲೆ ಹೊತ್ತು ಒಂದು ವ್ಯಕ್ತಿಯಲ್ಲ ಶಕ್ತಿ ಎಂದು ದೊಡ್ಡಮಟ್ಟಕ್ಕೆ ಬೆಳೆಸಿ, ಜೆ.ಹೆಚ್.ಪಟೇಲ್ ಸೇರಿದಂತೆ ಮೂವತ್ತೆಂಟು ಮಂದಿ ಲಿಂಗಾಯಿತ ಶಾಸಕರಿದ್ದರೂ ಅವರನ್ನು ಸಮಾಧಾನಪಡಿಸಿ, ಕೇವಲ ನಾಲ್ಕು ಮಂದಿ ಕುರುಬ ಸಮುದಾಯದ ಶಾಸಕರಿದ್ದರೂ ಸಿದ್ದರಾಮಯ್ಯರನ್ನು ಉಪಮುಖ್ಯಮಂತ್ರಿ ಮಾಡಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಜೊತೆಗಿರುವ ಏಳು ಮಂದಿಯಿಂದ ಜೆಡಿಎಸ್ ಪಕ್ಷವನ್ನು ನಿರ್ನಾಮ ಮಾಡಲು ಸಾಧ್ಯವಿಲ್ಲ. ನಾನು ಹೋದ ನಂತರವೂ ಈ ರಾಜ್ಯದ ರೈತರು, ಬಡವರು, ದಲಿತರು, ಹಿಂದುಳಿದ ವರ್ಗದವರು ಹಾಗೂ ಕಾರ್ಯಕರ್ತರು ಸೇರಿ ಪಕ್ಷವನ್ನು ಕಟ್ಟಿ ಬೆಳೆಸುವ ಜೊತೆಗೆ ರಾಜ್ಯದಲ್ಲಿ ಒಂದು ಕ್ರಾಂತಿಯ ಪಕ್ಷವನ್ನಾಗಿ ಮಾಡುತ್ತಾರೆಂಬ ನಂಬಿಕೆಯಿದೆ ಎಂದು ತಿಳಿಸಿದರು.ಚುನಾವಣೆಗೆ ಕೇವಲ ನಾಲ್ಕು ತಿಂಗಳಿರುವಾಗ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ತಲಾ ಸಾವಿರ ಕೋಟಿ ಅನುದಾನ ಕೊಡಲು ರಾಜ್ಯದ ಖಜಾನೆಯಲ್ಲಿ ಹಣ ಎಲ್ಲಿದೆ. ತರಾತುರಿಯಲ್ಲಿ ಎಲ್ಲ ಕ್ಷೇತ್ರಗಳಿಗೂ ಅನುದಾನ ಬಿಡುಗಡೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ನಾಲ್ಕು ವರ್ಷಗಳಿಂದ ಯಾಕೆ ಅನುದಾನ ಬಿಡುಗಡೆ ಮಾಡಲಿಲ್ಲ ಎಂದು ಪ್ರಶ್ನಿಸಿದ ದೇವೇಗೌಡ, ಈ ಸರ್ಕಾರ ಮಾಡಿರುವ ಎಲ್ಲ ಸಾಲವನ್ನು ಕುಮಾರಸ್ವಾಮಿಯೇ ತೀರಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದರು.
Comments