ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ ಅಣ್ಣಾ ಹಜಾರೆ
ಉದ್ಯಮಿಗಳ ಆತ್ಮಹತ್ಯೆ ಕುರಿತು ಮರುಗುವ ಕೇಂದ್ರ ಸರ್ಕಾರ ರೈತರ ಆತ್ಮಹತ್ಯೆಗಳಿಗೇಕೆ ಪ್ರತಿಕ್ರಿಯಿಸುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ಕಳೆದ 22 ವರ್ಷದಲ್ಲಿ ದೇಶದಲ್ಲಿ ಸುಮಾರು 12 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಉಧ್ಯಮಿಗಳ ಆತ್ಮಹತ್ಯೆ ಪ್ರಮಾಣವನ್ನು ನಾನು ತಿಳಿದುಕೊಳ್ಳಬೇಕಿದೆ ಎಂದು ಮೋದಿ ಸರ್ಕಾರದ ವಿರುದ್ಧ ಹಿರಿಯ ಹೋರಾಟಗಾರ ಅಣ್ಣಾ ಹಜಾರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ ಅಣ್ಣಾ ಹಜಾರೆ, ಚುನಾವಣೆಗೂ ಮೊದಲು ನರೇಂದ್ರ ಮೋದಿ ಅವರು ರೈತರಿಗೆ ನೀಡಿದ್ದ ಆಶ್ವಾಸನೆಯನ್ನು ಈಡೇರಿಸುವಲ್ಲಿ ವಿಫಲರಾಗಿದ್ದು, ಅವರು ಮಾತು ಉಳಿಸಿಕೊಂಡಿಲ್ಲ. ಪ್ರಧಾನಿ ಮೋದಿ ಅವರ ಕುರಿತು ನಾನು ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದೆ..ಆದರೆ ಅದು ಸುಳ್ಳಾಗಿದೆ. ಚುನಾವಣೆಗೂ ಮೊದಲು ದೇಶದ ಪ್ರತಿಯೊಬ್ಬ ನಾಗರಿಕನ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಕಪ್ಪುಹಣ ಹೂಡುವುದಾಗಿ ಹೇಳಿದ್ದ ಮೋದಿ ಕಪ್ಪುಹಣವನ್ನು ವಾಪಸ್ ತರುವಲ್ಲಿ ವಿಫಲರಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾಗಳು ರೈತ ವಿರೋಧಿಯಾಗಿ ಮತ್ತು ಕೈಗಾರಿಕಾ ಪರವಾಗಿ ಕೆಲಸ ಮಾಡುತ್ತಿದ್ದು, ರೈತರ ಸಮಸ್ಯೆಗಳಿಗೆ ಕಿವುಡ ಮತ್ತು ಮೂಕವಾಗಿವೆ. ರೈತರ ಬೆಳೆಗಳಿಗೆ ಕನಿಷ್ಠ ಸಹಾಯಧನ ನೀಡುವ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಆ ಬಗ್ಗೆ ಮಾತನಾಡುತ್ತಿಲ್ಲ. ಹೀಗಾಗಿ ದೇಶದಲ್ಲಿರುವ ಎಲ್ಲ ರೈತರೂ ಒಗ್ಗೂಡಿ ಹೋರಾಟ ನಡೆಸಿದರೆ ಮಾತ್ರ ಸರ್ಕಾರಗಳಿಗೆ ರೈತರು ಕಾಣುತ್ತಾರೆ. ರೈತರಿಗಾಗುತ್ತಿರುವ ಅನ್ಯಾಯವನ್ನು ಅವರೇ ಪ್ರತಿಭಟಿಸಬೇಕು ಎಂದು ಹೇಳಿದ್ದಾರೆ.
Comments