ಸಿದ್ದರಾಮಯ್ಯ ನವರ ಕಾರ್ಯವೈಖರಿಯ ಬಗ್ಗೆ ದೇವೇಗೌಡರ ಟೀಕೆ

ನಗರದ ಚಾಮರಾಜ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಚೇರಿ ಉದ್ಘಾಟನೆ ಹಾಗೂ ಹೆಬ್ಬಾಳು ಮೈದಾನದಲ್ಲಿ ನಡೆದ 'ಇನ್ನು ಕುಮಾರ ಪರ್ವ' ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು, ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಂತೆ ಕೆಲಸ ಮಾಡುತ್ತಿಲ್ಲ. ಒಂದು ವರ್ಗವನ್ನು ಓಲೈಸಿಕೊಳ್ಳಲು ಕೆಲಸ ಮಾಡುತ್ತಿದ್ದಾರೆ. ಇಂತಹ ಉದ್ದೇಶದಿಂದ ನಡೆಯುವ ಸರ್ಕಾರಗಳು ಹೆಚ್ಚು ದಿನವಿದ್ದರೆ ರಾಜ್ಯಕ್ಕೆ ಅಪಾಯವೆಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನನ್ನ ರಾಜಕೀಯ ಜೀವನದಲ್ಲಿ ಇಂತ ಕೆಟ್ಟ ಸರ್ಕಾರ ನೋಡಿಲ್ಲ. ಮುಂದೆ ಇಂತಹ ಸರ್ಕಾರವನ್ನು ನೋಡದಂತೆ ಜನರು ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹರಿಹಾಯ್ದಿದ್ದಾರೆ.
ಬಡತನ ಯಾವುದೇ ವರ್ಗಕ್ಕೆ ಮೀಸಲಾಗಿಲ್ಲ. ಎಲ್ಲ ವರ್ಗದಲ್ಲಿಯೂ ಬಡವರಿದ್ದಾರೆ. ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಲು ಮುಂದಾಗಬೇಕು. ಆದರೆ, ಒಂದು ವರ್ಗದಲ್ಲಿ ಮಾತ್ರ ಬಡತನವನ್ನು ಮುಖ್ಯಮಂತ್ರಿ ನೋಡುತ್ತಿದ್ದಾರೆ. ಇನ್ನುಳಿದ ವರ್ಗದವರು ಮನುಷ್ಯರಲ್ಲವೇ ಎಂದು ಪ್ರಶ್ನಿಸಿದ ಗೌಡರು, ಇಂತಹ ಸರ್ಕಾರವನ್ನು ಜನ ಮುಂದಿನ ದಿನಗಳಲ್ಲಿ ಕಿತ್ತೊಗೆಯಬೇಕು ಎಂದು ಕರೆ ನೀಡಿದರು.
ಎಚ್.ಡಿ. ಕುಮಾರಸ್ವಾಮಿ ಯಾವುದೇ ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ. ರಾಜ್ಯದ ಮನೆ ಮಗ, ಯಾವುದೇ ವರ್ಗದವರು ಬಂದು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬಹುದು. ರಾಜ್ಯದಲ್ಲಿ ಜೆಡಿಎಸ್ ಸ್ವಂತ ಬಲದಿಂದ ಅಧಿಕಾರ ಹಿಡಿಯುವಂತೆ ಮಾಡಲು ಪಕ್ಷದ ಕಾರ್ಯಕರ್ತರು ಶ್ರಮ ಪಡಬೇಕಿದೆ ಎಂದು ದೇವೇಗೌಡರು ಹೇಳಿದರು.
Comments