ರಾಹುಲ್ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್
ಗುಜರಾತ್ ವಿಧಾನಸಭಾ ಚುನಾವಣಾ ಅಖಾಡದಲ್ಲಿ ರಾಹುಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ನೇರ ಸಂಘರ್ಷ ಏರ್ಪಟ್ಟಿದೆ. ಈಗ ರಾಹುಲ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಅಲಂಕರಿಸಿದರೆ 2019 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಲಿದ್ದಾರೆ.
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಪಟ್ಟಾಭಿಷೇಕಕ್ಕೆ ಕೊನೆಗೂ ಮೂಹೂರ್ತ ಫಿಕ್ಸ್ ಆಗಿದೆ. ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಈ ಪ್ರಕ್ರಿಯೆಗೆ ಡಿಸೆಂಬರ್ ಮೊದಲನೇ ವಾರದಲ್ಲಿ ಚಾಲನೆ ಸಿಗಲಿದೆ. ನಾಳೆ ದೆಹಲಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಣಯ ಕೈಗೊಳ್ಳುವ ನಿರೀಕ್ಷೆಯಿದೆ. ಪಕ್ಷದ ಸಂವಿಧಾನದ ಅನುಸಾರ ನೂತನ ಅಧ್ಯಕ್ಷರನ್ನು ಚುನಾಯಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಒಪ್ಪಿಗೆ ಪಡೆಯಬೇಕಾಗಿದೆ. ಆಂತರಿಕ ಚುನಾವಣೆ ನಡೆಸುವ ಸಂಬಂಧ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ ಎಂದು ಮೂಲಗಳು ತಿಳಿಸಿವೆ.
ಗುಜರಾತ್ ವಿಧಾನಸಭಾ ಚುನಾವಣೆಯ ಕಾವು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಪಕ್ಷದ ಚುನಾವಣೆಯನ್ನು ಪೂರ್ಣಗೊಳಿಸುವ ಕುರಿತು ಹೈಕಮಾಂಡ್ ಚಿಂತನೆ ನಡೆಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 19 ವರ್ಷಗಳ ಸುದೀರ್ಘ ಅವಧಿಯಿಂದ ಅಧ್ಯಕ್ಷೆ ಪಟ್ಟಿ ಅಲಂಕರಿಸಿರುವ ಸೋನಿಯಾ ಗಾಂಧಿಯವರ ಪಾರು ಪತ್ಯಕ್ಕೆ ತೆರೆ ಬೀಳಲಿದೆ. ಜನವರಿ 2013 ರಲ್ಲಿ ರಾಹುಲ್ ಅವರನ್ನು ಎಐಸಿಸಿ ಉಪಾಧ್ಯಕ್ಷರನ್ನಾಗಿ ಹೈಕಮಾಂಡ್ ನೇಮಕ ಮಾಡಿತ್ತು. ಈ ಹುದ್ದೆ ಅಲಂಕರಿಸಿದ ನಂತರ ರಾಹುಲ್ ಗಾಂಧಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಕೂಗು ಪಕ್ಷದ ಆಂತರಿಕ ವಲಯದಲ್ಲಿ ಕೇಳಿ ಬಂದಿತ್ತು. ದೀಪಾವಳಿ ಹಬ್ಬದ ನಂತರ ರಾಹುಲ್‌ಗೆ ಪಟ್ಟಾಭಿಷೇಕ ಮಾಡಲು ಹೈಕಮಾಂಡ್ ಮುಂದಾಗಿತ್ತಾದರೂ ಈ ಪ್ರಕ್ರಿಯೆ ಮತ್ತಷ್ಟು ಮುಂದಕ್ಕೆ ಹೋಗಿತ್ತು.
Comments