ಜಿಲ್ಲಾಡಳಿತಕ್ಕೆ ಕೆ.ಎಸ್. ಈಶ್ವರಪ್ಪ ಖಡಕ್ ವಾರ್ನಿಂಗ್

ಭಾರತ್ ಮಾತ ಕೀ ಜೈ ವಂದೇ ಮಾತರಂ ಎಂದು ಕೂಗುವ ನಮ್ಮ ಪಕ್ಷದ ಒಬ್ಬ ಕಾರ್ಯಕರ್ತನ ಮೇಲೆ ಇನ್ನು ಮುಂದೆ ಪೊಲೀಸರು ಕೇಸು ದಾಖಲಿಸಿದ್ದೇ ಆದರೆ ಚಿತ್ರದುರ್ಗದಲ್ಲಿ ಐವತ್ತು ಸಾವಿರ ಜನರನ್ನು ಸೇರಿಸಿ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಹುಷಾರ್ ಎಂದು ಜಿಲ್ಲಾ ಪೊಲೀಸ್ ಹಾಗೂ ಜಿಲ್ಲಾಡಳಿತವನ್ನು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಎಚ್ಚರಿಸಿದರು.
ದೇಶದ್ರೋಹಿಗಳ ಮೇಲೆ ಕೇಸು ಹಾಕುವ ಬದಲು ದೇಶಭಕ್ತರ ಮೇಲೆ ಕೇಸು ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡುತ್ತಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ಬಿಜೆಪಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಒನಕೆ ಓಬ ವ್ವ ವೃತ್ತದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಜಿಲ್ಲೆಯಲ್ಲಿ ೯೪ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಿ ಭಯದ ವಾತಾವರಣ ನಿರ್ಮಿಸಿದ್ದೀರಿ. ಸಾರ್ವಜನಿಕರ ತೆರಿಗೆ ಹಣದಲ್ಲಿ ಪ್ರತಿ ತಿಂಗಳು ಸಂಬಳ ಪಡೆದುಕೊಳ್ಳುತ್ತಿರುವ ನೀವುಗಳು ಕಾಂಗ್ರೆಸ್ ಏಜೆಂಟರಂತೆ ವರ್ತಿಸುವ ಕಾಲ ಇನ್ನು ಮುಗಿಯಿತು. ಮುಂದೆ ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಶತಸಿದ್ದ. ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಬಾಲ ಹಿಡಿದುಕೊಂಡು ಹೋಗುತ್ತಿರುವ ಆಂಜನೇಯರನ್ನು ಯಾರು ಕಾಪಾಡುವುದಿಲ್ಲ ಎಂದು ಗುಡುಗಿದರು.
ಭಾರತದಲ್ಲಿಯೆ ಇದ್ದುಕೊಂಡು ಪಾಕಿಸ್ತಾನಕ್ಕೆ ಜೈಕಾರ ಹಾಕುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದವರು ಭಯೋತ್ಪಾದಕರಂತೆ ಕಾಣಿಸುವುದಿಲ್ಲವೇ ನಿಮ್ಮ ಕಣ್ಣಿಗೆ ಎಂದು ಮುಖ್ಯಮಂತ್ರಿಯನ್ನು ಪ್ರಶ್ನಿಸಿದ ಕೆ.ಎಸ್.ಈಶ್ವರಪ್ಪ ಸೋನಿಯಾಗಾಂಧಿ ಹಾಗೂ ರಾಹುಲ್ಗಾಂಧಿಯನ್ನು ತೃಪ್ತಿಪಡಿಸಲು ಹೊರಟಿದ್ದಾರೆ ಎಂದರು. ಚಿತ್ರದುರ್ಗ ಇತಿಹಾಸಕ್ಕೆ ಅಪಚಾರ ಎಸಗಿದ ಟಿಪ್ಪುಜಯಂತಿಯನ್ನು ಆಚರಿಸುವುದು ಬೇಡ ಎಂದು ವಿರೋಧಿಸಿದ ನಮ್ಮ ಪಕ್ಷದ ೯೪ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ಹೂಡಿದ್ದೀರಿ. ಮಹಂತೇಶ್ನಾಯಕ ಹಾಗೂ ಇತರೆಯವರು ಹೆದರಬೇಡಿ. ನಿಮ್ಮ ಹಿಂದ ಲಕ್ಷಾಂತರ ಕಾರ್ಯಕರ್ತರಿದ್ದಾರೆ ಎಂದರು.
Comments