ಪ್ರಧಾನಿ ಮೋದಿಯವರು ದೇವೇಗೌಡರಂತೆ ಮನಸ್ಸು ಮಾಡುತ್ತಿಲ್ಲ
ಹುಬ್ಬಳ್ಳಿಯಲ್ಲಿ ನಡೆದ ಜೆಡಿಎಸ್ ಕಾರ್ಯಕಾರಿಣಿ ಸಭೆ ಬಳಿಕ ಮಾತನಾಡಿದ ಸಿಂಧ್ಯಾ, ಮಹದಾಯಿ ವಿವಾದ ಸಂಬಂಧ ವೈಮನಸ್ಸಿಗೆ ಪ್ರಧಾನಿ ಮೋದಿ ಇತಿಶ್ರೀ ಹಾಡಬೇಕು. ಅದ್ರೆ ಪ್ರಧಾನಿ ನರೇಂದ್ರ ಮೋದಿಯವರು ದೇವೇಗೌಡರಂತೆ ಮನಸ್ಸು ಮಾಡುತ್ತಿಲ್ಲ ಎಂದು ಆರೋಪಿಸಿದರು.
ದೇವೇಗೌಡರು ಪ್ರಧಾನಿಯಾದಾಗ ಬೆಂಗಳೂರಿಗೆ ಕಾವೇರಿ ನದಿ ನೀರನ್ನ ಒದಗಿಸಿದ್ದರು. ಅಂತೆಯೇ ಪ್ರಧಾನಿ ಮೋದಿ ಕೂಡ ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನ ಟ್ರಿಬ್ಯುನಲ್ ಹೊರಗೆ ಇತ್ಯರ್ಥ ಪಡಿಸಬೇಕು. ಈಗಾಗಲೇ ರೈತಾಪಿ ವರ್ಗ ತೊಂದರೆಯಲ್ಲಿದೆ. ಮಹದಾಯಿ ವಿವಾದ ಪರಿಹಾರಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತನ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಮುಂಬರುವ ಚುನಾವಣೆ ಬಗ್ಗೆ ಮಾತನಾಡಿದ ಸಿಂಧ್ಯಾ, ಡಿಸೆಂಬರ್‌ನಿಂದ ಚುನಾವಣೆ ತಯಾರಿ ಚುರುಕುಗೊಳ್ಳುತ್ತೆ. ದೇವೇಗೌಡರ, ಕುಮಾರಸ್ವಾಮಿಯವರ ಮತ್ತು ರಾಮಕೃಷ್ಣ ಹೆಗಡೆಯವರ ಸಾಧನೆಯನ್ನ ಮನೆ ಮನೆಗೆ ತಲುಪಿಸುತ್ತೇವೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ವಿಚಾರ ದೇವೇಗೌಡರಿಗೇ ಬಿಟ್ಟದ್ದು. 224 ಸೀಟುಗಳನ್ನ ಗೆಲ್ಲುವ ನಿಟ್ಟಿನಲ್ಲಿ ಅನುಭವಿಗಳನ್ನು ಆಯ್ಕೆ ಮಾಡಲಾಗುತ್ತೆ. ಶೀಘ್ರದಲ್ಲೇ 126 ಅಭ್ಯರ್ಥಿಗಳ ಮೊದಲನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಬಳಿಕ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ, ಮಹದಾಯಿ ಯೋಜನೆ ಜಾರಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂಬುದು ಸ್ಪಷ್ಟ. ಇಷ್ಟು ದಿನ ಸುಮ್ಮನಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒಂದು ತಿಂಗಳಲ್ಲಿ ಯೋಜನೆ ಜಾರಿ ಮಾಡುವ ಭರವಸೆ ನೀಡಿದ್ದಾರೆ. ಯಾರೇ ಮಾಡಲಿ ಯೋಜನೆ ಜಾರಿ ಮಾಡಿದರೆ ಒಳ್ಳೆಯದು. ಅದು ಬಿಟ್ಟು ರಾಜಕೀಯ ಮಾಡಬೇಡಿ ಎಂದು ಕಿವಿಮಾತು ಹೇಳಿದರು.
Comments