ಜಾರ್ಜ್ ರಾಜೀನಾಮೆಗೆ ಸಂಕಲ್ಪ ಮಾಡಿದ್ದ ಬಿಜೆಪಿ ನಾಯಕರು ವಿದಾಯ ಹಾಡಿದ್ದಾರೆ

'ಪರ-ವಿರೋಧದ ಚರ್ಚೆ ಮಧ್ಯೆ, ಒಂದೇ ದಿನಕ್ಕೆ ಹೋರಾಟ ಕೈಬಿಡುವುದು ಬೇಡ. ಇನ್ನೊಂದು ದಿನ ಧರಣಿ ಮುಂದುವರಿಸೋಣ. ಸರ್ಕಾರ ಏನು ಮಾಡುತ್ತದೆ ನೋಡೋಣ. ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳೋಣ ಎಂಬ ತೀರ್ಮಾನಕ್ಕೆ ಬರಲಾಗಿತ್ತು' ಎಂದು ಮೂಲಗಳು ಹೇಳಿವೆ.
ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆ ನೀಡುವವರೆಗೆ ಹೋರಾಟ ನಡೆಸಲು ಸಂಕಲ್ಪ ಮಾಡಿದ್ದ ಬಿಜೆಪಿ ನಾಯಕರು ಬುಧವಾರ ಹೋರಾಟಕ್ಕೆ ವಿದಾಯ ಹಾಡಿದ್ದಾರೆ. ಜಾರ್ಜ್ ವಿರುದ್ಧದ ಹೋರಾಟ ಮುಂದುವರಿಸುವ ಕುರಿತು ಮಂಗಳವಾರ ರಾತ್ರಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪವಾಯಿತು. 'ಒಂದೇ ದಿನಕ್ಕೆ ಹೋರಾಟ ಕೈಬಿಟ್ಟರೆ ಪಕ್ಷದ ನಿಲುವಿಗೆ ಹಿನ್ನಡೆಯಾಗಲಿದೆ. ಹೋರಾಟ ಮುಂದುವರಿಸಲೇಬೇಕು' ಎಂದು ವಿರೋಧ ಪಕ್ಷದ ಉಪನಾಯಕ ಆರ್. ಅಶೋಕ್ ಹಾಗೂ ದಕ್ಷಿಣ ಭಾಗದ ಶಾಸಕರು ಆಗ್ರಹಿಸಿದರು.
'ವಿಧಾನಮಂಡಲ ಕಲಾಪದ ಮುಂದಿನ ದಿನಗಳಲ್ಲಿ ಮಹದಾಯಿ, ನಂಜುಂಡಪ್ಪ ವರದಿ ಅನುಷ್ಠಾನ ಸೇರಿದಂತೆ ಉತ್ತರ ಕರ್ನಾಟಕದ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ವಿಶೇಷ ಆದ್ಯತೆ ನೀಡಲಾಗುವುದು ಎಂದು ಸರ್ಕಾರ ಸಭಾಧ್ಯಕ್ಷರ ಮೂಲಕ ಹೇಳಿಸಿದೆ. ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಕಲಾಪಕ್ಕೆ ಅಡ್ಡಿ ಪಡಿಸಿದರೆ ಉತ್ತರ ಕರ್ನಾಟಕದ ವಿರೋಧಿಗಳು ಎಂಬ ಟೀಕೆಯನ್ನು ಸರ್ಕಾರ ಮಾಡಲಿದೆ. ಮಾಧ್ಯಮಗಳು ಕೂಡ ಇದನ್ನೇ ಬಿಂಬಿಸಲಿವೆ' ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಹೇಳಿದರು ಎಂದು ಮೂಲಗಳು ತಿಳಿಸಿವೆ. ಇಲ್ಲಿ ಬಂದು ಸಿಬಿಐ, ಜಾರ್ಜ್ ಎಂದು ಧರಣಿ ನಡೆಸಿದರೆ ಈ ಭಾಗದ ಜನರಿಗೆ ಏನು ಪ್ರಯೋಜನ? ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ನಡೆಸದೇ ಇದ್ದರೆ ಕ್ಷೇತ್ರದ ಜನರಿಗೆ ಏನು ಉತ್ತರ ನೀಡುವುದು' ಎಂದು ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಹಲವು ಶಾಸಕರು ತಕರಾರು ತೆಗೆದರು.
Comments