ವೈದ್ಯರಿಗೆ ಮುಷ್ಕರ ಕೈಬಿಡುವಂತೆ ಸಿಎಂ ಟ್ವಿಟರ್ ನಲ್ಲಿ ಮನವಿ

ವೈದ್ಯರಿಗೆ ಮುಷ್ಕರ ಕೈಬಿಡುವಂತೆ ಟ್ವಿಟ್ಟರ್ ನಲ್ಲಿ ಮನವಿ ಮಾಡಿರುವ ಸಿಎಂ ಸಿದ್ದರಾಮಯ್ಯ, ಸದನದಲ್ಲಿ ಇನ್ನೂ ವಿಧೇಯಕವೇ ಮಂಡನೆಯಾಗಿಲ್ಲ. ಖಾಸಗೀ ವೈದ್ಯರ ಜೊತೆಗೆ ಸರ್ಕಾರವಿದೆ ಎಂದು ಹೇಳಿದ್ದಾರೆ.
ಹೌದು ಖಾಸಗೀ ವೈದ್ಯರು ನಡೆಸುತ್ತಿರುವ ಮುಷ್ಕರ ಇಂದಿಗೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ವೈದ್ಯರ ಮುಷ್ಕರದಿಂದಾಗಿ, ರಾಜ್ಯದ ಎಲ್ಲೆಲ್ಲೂ ಚಿಕಿತ್ಸೆ ದುರ್ಲಭವಾಗಿದೆ. ರೋಗಿಗಳ ಪರದಾಟ ಹೇಳತೀರದಾಗಿದೆ. ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಕಂಡು, ಎಲ್ಲೆಲ್ಲೂ ಅಯ್ಯೋ, ಅಪ್ಪಾ, ಅಮ್ಮ ನನ್ನ ಮಗ, ನಮ್ಮ ಅಪ್ಪ, ಅಮ್ಮ, ತಾಯಿ, ತಂದೆ ಉಳಿಸಿಕೊಡಿ, ಚಿಕಿತ್ಸೆ ನೀಡಿ ಪುಣ್ಯ ಕಟ್ಟಿಕೊಳ್ಳಿ ಎಂದು ರೋಗಿಗಳ ಸಂಬಂಧಿಕರು ದುಂಬಾಲು ಬೀಳುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳು ಎಲ್ಲೆಲ್ಲೂ ತುಂಬಿ ತುಳುಕುತ್ತಿವೆ. ವೈದ್ಯರಿದ್ದರೇ, ಚಿಕಿತ್ಸೆ ಇಲ್ಲ, ಚಿಕಿತ್ಸೆ ದೊರೆತರೇ ಮತ್ತಾವುದೋ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲಿ ಇಲ್ಲದೇ ಜನ ತೊಂದರೆಗೆ ಒಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಟ್ವಿಟ್ ಮಾಡಿದ್ದಾರೆ. ಈ ಟ್ವಿಟ್ ನಲ್ಲಿ, ಖಾಸಗೀ ವೈದ್ಯರಲ್ಲಿ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರ ನಿಮ್ಮೊಂದಿಗೆ ಇದೆ. ಸರ್ಕಾರ ಇನ್ನೂ ವಿಧೇಯಕವನ್ನೇ ಮಂಡಿಸಿಲ್ಲ. ಖಾಸಗೀ ವೈದ್ಯರ ಜೊತೆಗೆ ಸರ್ಕಾರವಿದೆ. ದಯವಿಟ್ಟು ಮುಷ್ಕರವನ್ನು ಹಿಂತೆಗೆದುಕೊಂಡು, ರಾಜ್ಯದಲ್ಲಿ ಪರದಾಡುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡುವಂತೆ ಕೋರಿಕೊಂಡಿದ್ದಾರೆ.
Comments