ಇಂದಿರಾ ಕ್ಯಾಂಟೀನ್ ನಂತರ ಇಂದಿರಾ ಸಾರಿಗೆ ಚಿಂತನೆಯತ್ತ ಕಾಂಗ್ರೆಸ್ ಸರ್ಕಾರ

ಶ್ರಮಿಕರು, ಕಟ್ಟಡ ಕಾರ್ಮಿಕರು, ಬಡವರು, ನಿರ್ಗತಿಕರು, ಅನಾಥರಿಗೆ ಅನುಕೂಲವಾಗುವಂತೆ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲಾಯಿತು. ಇದೀಗ ಗಾರ್ಮೆಂಟ್ಸ್‍ಗಳು ಹಾಗೂ ಇನ್ನಿತರ ಕಡೆ ದುಡಿಯುವ ಮಹಿಳೆಯರನ್ನು ಗಮನದಲ್ಲಿರಿಸಿಕೊಂಡು ಅವರ ಓಡಾಟಕ್ಕೆ ಅನುಕೂಲವಾಗುವಂತೆ ಶೇ.50ರ ರಿಯಾಯಿತಿ ದರದಲ್ಲಿ ಬಸ್‍ಗಳ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲು ಇಂದಿರಾ ಸಾರಿಗೆ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ.
ಈ ಸಂಬಂಧ ಬಿಎಂಟಿಸಿ ಹಾಗೂ ನಾಲ್ಕು ಸಾರಿಗೆ ನಿಗಮಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ತಿಳಿಸಿದ್ದಾರೆ. ಈಗಾಗಲೇ ಅಟಲ್ ಸಾರಿಗೆ ಜಾರಿಯಲ್ಲಿದೆ. ಮಹಿಳೆಯರನ್ನು ಗಮನದಲ್ಲಿರಿಸಿಕೊಂಡು ಇಂದಿರಾ ಸಾರಿಗೆಯನ್ನು ಜಾರಿಗೊಳಿಸಲಾಗುತ್ತಿದೆ. ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದ್ದು, ಮುಂದಿನ ತಿಂಗಳ ಅಂತ್ಯದಲ್ಲಿ ಈ ಅಂತಿಮ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಬಹುತೇಕ ಗ್ರಾಮೀಣ ಪ್ರದೇಶದ ಮಹಿಳೆಯರು ರಾಜಧಾನಿ ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ಹಾಗೂ ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಪ್ರತಿದಿನ ತಮ್ಮ ಕೆಲಸಗಳಿಗೆ ತೆರಳಲು ಬಿಎಂಟಿಸಿ ಬಸ್‍ಗಳನ್ನು ಆಶ್ರಯಿಸಿದ್ದಾರೆ. ಅವರಿಗೆ ಬಸ್‍ಗಳ ಪ್ರಯಾಣದ ವೆಚ್ಚದಲ್ಲಿ ಶೇ.50ರಷ್ಟು ತಗ್ಗಿಸಿದರೆ ಜೀವನಕ್ಕೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಿದೆ. ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಸಾಧ್ಯ-ಅಸಾಧ್ಯತೆಗಳನ್ನು ಚರ್ಚಿಸಿ ಯೋಜನೆ ಜಾರಿಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
Comments