ರಾಜ್ಯದ ಜನತೆ ಜೆಡಿಎಸ್ ಗೆ ಬೆಂಬಲ ನೀಡುತ್ತಿರುವುದು ಕಾಂಗ್ರೆಸ್, ಬಿಜೆಪಿಗೆ ಆತಂಕ : ಎಚ್ ಡಿಕೆ

ಕಾಂಗ್ರೆಸ್, ಬಿಜೆಪಿ ಮುಖಂಡರು ಬಹಿರಂಗವಾಗಿ ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಿದರೂ, ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಸಭೆಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಸಿಗುತ್ತಿರುವ ಜನಬೆಂಬಲದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಕ್ಷದ ಕಚೇರಿ 'ಜೆಪಿ' ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ''ಮುಂದಿನ ಚುನಾವಣೆಯಲ್ಲಿ ಪಕ್ಷ ಗುರಿ ಮುಟ್ಟಲಿದ್ದು, ಗೆಲುವು ಸಾಧಿಸುವುದು ನಿಶ್ಚಿತ. ಎರಡೂ ರಾಷ್ಟ್ರೀಯ ಪಕ್ಷಗಳ ಮೇಲೆ ವಿಶ್ವಾಸ ಕಳೆದುಕೊಂಡಿರುವ ರಾಜ್ಯದ ಜನತೆ ಜೆಡಿಎಸ್ ಬೆಂಬಲಕ್ಕೆ ನಿಂತಿದ್ದಾರೆ'' ಎಂದು ಹೇಳಿದರು.ಬಿಜೆಪಿಗೆ ಸ್ವಂತ ಬಲದ ಮೇಲೆ ಗೆಲ್ಲುವ ವಿಶ್ವಾಸವಿಲ್ಲ. ಈ ಕಾರಣಕ್ಕೆ ಬೇರೆ ಪಕ್ಷಗಳಿಂದ ಅವರಿವರನ್ನು ಹುಡುಕಿ ಪಕ್ಷಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಕಾಂಗ್ರೆಸ್ ಸೇರುತ್ತಿರುವ ಜೆಡಿಎಸ್‌ನ ಬಂಡಾಯ ಶಾಸಕರ ವಿಚಾರದಲ್ಲೂ ಯಾವುದೇ ಶಿಸ್ತು ಕ್ರಮ ಕೈಗೊಳ್ಳುವ ಅಗತ್ಯವಿಲ್ಲ. ಜನರೇ ಅವರಿಗೆ ಪಾಠ ಕಲಿಸುತ್ತಾರೆ. ರಾಜ್ಯದ ಜನರ ಆಶೀರ್ವಾದ ಕೇಳಿ ರಾಜ್ಯ ಪ್ರವಾಸ ಕೈಗೊಂಡಿದ್ದು, ಉತ್ತಮ ಬೆಂಬಲ ಸಿಗುತ್ತಿದೆ ಎಂದರು.
ಸ್ಥಳೀಯ ಸಮಸ್ಯೆ ಅರಿತುಕೊಳ್ಳಲು ನಡೆಸುತ್ತಿರುವ ಗ್ರಾಮ ವಾಸ್ತವ್ಯದ ಕುರಿತು ಸಿಎಂ ಸಿದ್ದರಾಮಯ್ಯ ಅವರ ಸರ್ಟಿಫಿಕೇಟ್ ಬೇಕಿಲ್ಲ. ಸಿದ್ದರಾಮಯ್ಯ ಅವರನ್ನು ಮೆಚ್ಚಿಸಬೇಕು ಎಂಬ ಕಾರಣಕ್ಕೆ ನಾನು ಗ್ರಾಮ ವಾಸ್ತವ್ಯ ಮಾಡುತ್ತಿಲ್ಲ. ದಲಿತರ ಮನೆಯ ವಾಸ್ತವ್ಯ ವೇಳೆ ಅವರ ಹಾಸಿಗೆ, ದಿಂಬನ್ನೇ ಬಳಸಿಕೊಂಡಿದ್ದೇನೆ. ನನ್ನ ಗ್ರಾಮ ವಾಸ್ತವ್ಯವನ್ನು ಕಾಂಗ್ರೆಸ್‌ನವರು ಅನುಸರಿಸಲು ಮುಂದಾಗಿದ್ದು, ಕಾಪಿ ಮಾಡುವುದನ್ನೂ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಮುಖಂಡರಿಗೆ ಸರಿಯಾಗಿ ಕಲಿಸಿಲ್ಲ'' ಎಂದು ತಿರುಗೇಟು ನೀಡಿದರು.ಟಿಪ್ಪು ಸುಲ್ತಾನ್ ಹೆಸರು ಮುಂದಿಟ್ಟುಕೊಂಡು ಕಾಂಗ್ರೆಸ್ ಸರಕಾರ ಮತಬ್ಯಾಂಕ್ ರಾಜಕಾರಣ ಮಾಡಲು ಹೊರಟಿದೆ. 144ನೇ ಸೆಕ್ಷನ್ ಜಾರಿ ಮಾಡಿ ಟಿಪ್ಪು ಜಯಂತಿ ಆಚರಿಸುವ ಅಗತ್ಯವಿತ್ತಾ? ಜಯಂತಿ ಆಚರಣೆ ವಿಚಾರದಲ್ಲಿ ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್ ಕೂಡ ಟಿಪ್ಪುಗೆ ಅಗೌರವ ಉಂಟುಮಾಡಿದೆ ಎಂದರು.
Comments