ಟಿಪ್ಪು ಜಯಂತಿ ಬೆಂಬಲಿಸಿ ಅಚ್ಚರಿ ಮೂಡಿಸಿದ ಬಿಜೆಪಿ ಶಾಸಕರು!

ಟಿಪ್ಪು ಸುಲ್ತಾನ್ ಜಯಂತಿಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತ ಪಡಿಸಿ ಹಲವು ಕಡೆ ಪ್ರತಿಭಟನೆ ನಡೆಸಿದೆ. ಇಬ್ಬರು ಬಿಜೆಪಿ ಶಾಸಕರು ಟಿಪ್ಪು ಜಯಂತಿಗೆ ತಮ್ಮ ಬೆಂಬಲ ವ್ಯಕ್ತ ಪಡಿಸಿ ಎಲ್ಲರಲ್ಲೂ ಅಚ್ಚರಿಯ ಜೊತೆಗೆ ಗೊಂದಲ ಮೂಡಿಸಿದ್ದಾರೆ.
ವಿಜಯನಗರ ಬಿಜೆಪಿ ಶಾಸಕ ಆನಂದ್ ಸಿಂಗ್ ನಗರ ಸಭೆಯ ಆವರಣದಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೀಪ ಬೆಳಗಿಸಿ ಟಿಪ್ಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿರುವುದು ಕಾರ್ಯಕರ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಈ ಬಗ್ಗೆ ಸಮರ್ಥನೆ ನೀಡಿರುವ ಆನಂದ್ ಸಿಂಗ್, ನಾನು ಎಲ್ಲಾ ಧರ್ಮದವರನ್ನು ಗೌರವಿಸುತ್ತೇನೆ. ಮುಸ್ಲಿಂ ಬಾಂಧವರ ಭಾವನೆಗಳಿಗೆ ಧಕ್ಕೆಯಾಗಬಾರದು. ಎಲ್ಲಾ ಜಯಂತಿಗಳಲ್ಲೂ ನಾನು ಪಾಲ್ಗೊಂಡಿದ್ದೇನೆ. ಅಂತೆಯೇ ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದೇನೆ. ಕೃಷ್ಣ ದೇವರಾಯರ ಕಾಲದಿಂದಲೂ ಇಲ್ಲಿ ಸಮಾನತೆ ಇದೆ.ಈ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ' ಎಂದಿದ್ದಾರೆ. ಇನ್ನೂ ಬೊಮ್ಮನಹಳ್ಳಿಯಲ್ಲಿ ಬಿಜೆಪಿ ಶಾಸಕ ಎಂ. ಸತೀಶ್ ರೆಡ್ಡಿ ಟಿಪ್ಪು ಜಯಂತಿಗೆ ಶುಭಕೋರಿ ಮುಸ್ಲಿಂ ಟೋಪಿ ಧರಿಸಿರುವ ಭಾವ ಚಿತ್ರವುಳ್ಳ ಫ್ಲೆಕ್ಸ್ಗಳು ಎಲ್ಲೆಲ್ಲೂ ರಾರಾಜಿಸುತ್ತಿವೆ, ಇದರಿಂದ ಸ್ಥಳೀಯ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸತೀಶ್ ರೆಡ್ಡಿ, ಗೊಂದಲ ಮೂಡಿಸುವ ನಿಟ್ಟಿನಲ್ಲಿ ನನ್ನ ರಾಜಕೀಯ ವಿರೋಧಿಗಳು ಈ ಫ್ಲೆಕ್ಸ್ ಹಾಕಿದ್ದಾರೆ. ನಾನು ಪೊಲೀಸರು ಮತ್ತು ಬಿಬಿಎಂಪಿಗೆ ತಿಳಿಸಿ ಫ್ಲೆಕ್ಸ್ ತೆರವುಗೊಳಿಸಿದ್ದೇನೆ ಎಂದು ಹೇಳಿದ್ದಾರೆ.
Comments