ಜೆಡಿಎಸ್ ತೊರೆಯುವ ಪ್ರಶ್ನೆಯೇ ಇಲ್ಲ : ಶಾಸಕ ಪಿಳ್ಳಮುನಿಶಾಮಪ್ಪ ಸ್ಪಷ್ಟನೆ

ಮೊದಲ ಬಾರಿಗೆ ಮಂಡಲ್ ಪಂಚಾಯಿತಿ ಚುನಾವಣೆಗೆ ನಿಂತಾಗಲೂ ಜೆ.ಡಿ.ಎಸ್ ನಿಂದ ಸ್ಪರ್ಧಿಸಿದ್ದೆ, ಅಲ್ಲಿಂದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮುಗಿಸಿ ಈಗ ಶಾಸಕನಾಗಿದ್ದೇನೆ, ಎಲ್ಲ ಚುನಾವಣೆಗಳನ್ನು ಜೆ.ಡಿ.ಎಸ್ ಪಕ್ಷದ ಗುರುತನ್ನು ಬೆನ್ನಿಗಿಟ್ಟುಕೊಂಡೇ ಗೆಲುವು ಸಾಧಿಸಿದ್ದೇನೆ ಹಾಗಾಗಿ ಪಕ್ಷ ಬಿಡುವ ಮಾತೇ ಇಲ್ಲ ಎಂದರು.
ದೇವನಹಳ್ಳಿ ಕ್ಷೇತ್ರದ ಜೆ.ಡಿ.ಎಸ್ ಶಾಸಕ ಪಿಳ್ಳಮುನಿಶಾಮಪ್ಪ ಅವರು ಜೆ.ಡಿ.ಎಸ್ ತೊರೆದು ಬಿ.ಜೆ.ಪಿ ಸೇರುತ್ತಾರೆಂಬ ಊಹಾಪೋಹ ಕ್ಷೇತ್ರದಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ನವೆಂಬರ್ 9 ರ ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದ ಅವರು ತಾವು ಜೆ.ಡಿ.ಎಸ್ ಬಿಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.ಈ ಬಾರಿಯ ಟಿಕೆಟ್ ಗಾಗಿ ನಿಸರ್ಗ ನಾರಾಯಣಸ್ವಾಮಿ ಅವರು ಭಾರಿ ಪೈಪೋಟಿ ನೀಡುತ್ತಿದ್ದು, ಪಿಳ್ಳಮುನಿಶಾಮಪ್ಪ ಅವರಿಗೆ ಚುನಾವಣಾ ಟಿಕೆಟ್ ಇನ್ನೂ ಖಾತರಿಯಾಗದ ಹಿನ್ನೆಲೆಯಲ್ಲಿ ಈ ರೀತಿಯ ಊಹಾಪೋಹ ಹರಿದಾಡಿದೆ. ಅದಲ್ಲದೆ ನವೆಂಬರ್ 8ರ ಬುಧವಾರ ಖಾಸಗಿ ವಾಹಿನಿಯೊಂದರಲ್ಲಿ ರಾಜ್ಯದ ಐದು ಮಂದಿ ಜೆ.ಡಿ.ಎಸ್ ಶಾಸಕರನ್ನು 'ಬಿ.ಜೆ.ಪಿ ಆಪರೇಷನ್ ಕಮಲ' ಮಾಡಲಿದೆ ಎಂದು ಪ್ರಸಾರವಾದ ವರದಿಯಲ್ಲಿ ಪಿಳ್ಳಮುನಿಶಾಮಪ್ಪ ಅವರ ಹೆಸರು ಇದ್ದುದರಿಂದ ಅನುಮಾನಗಳಿಗೆ ರೆಕ್ಕೆ ಪುಕ್ಕ ಬಂದು ಖುದ್ದು ಶಾಸಕರೇ ಸ್ಪಷ್ಟೀಕರಣ ನೀಡಬೇಕಾಗಿ ಬಂದಿದೆ.
Comments