ನವೆಂಬರ್ ಅಂತ್ಯಕ್ಕೆ ಜೆಡಿಎಸ್ ನ 150 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ : ಎಚ್ ಡಿಕೆ

ಶಿವಮೊಗ್ಗ ತಾಲ್ಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಬಳಿಕ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ಘೋಷಣೆಯಷ್ಟೇ ಬಾಕಿ ಉಳಿದಿದೆ. ಪಕ್ಷದ ಕೋರ್ ಕಮಿಟಿ ಸಭೆ ಬಳಿಕ ಈ ತಿಂಗಳ ಅಂತ್ಯದಲ್ಲಿ ಮೊದಲ ಹಂತದ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು.
ನವೆಂಬರ್ ತಿಂಗಳ ಅಂತ್ಯದ ವೇಳೆಗೆ ಜೆಡಿಎಸ್ ನ 150 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.ಜೆಡಿಎಸ್ ಯಾತ್ರೆ, ಕಾಂಗ್ರೆಸ್ ಹಾಗೂ ಬಿಜೆಪಿಗೆ ನಿದ್ದೆಗೆಡಿಸಿದೆ. ಈಗಾಗಲೇ ರಾಜ್ಯದಾದ್ಯಂತ ಜೆಡಿಎಸ್ ಪರ ಒಲವು ವ್ಯಕ್ತವಾಗುತ್ತಿದೆ. ಜೆಡಿಎಸ್ ಕಿಂಗ್ ಮೇಕರ್ ಆಗುವ ಪ್ರಶ್ನೆ ಇಲ್ಲ. ನಾವು ಕಿಂಗ್ ಆಗುತ್ತೇವೆ ನಮ್ಮ ಗುರಿ 113 ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿಯುವುದಾಗಿದೆ. ಹೀಗಾಗಿ ಕಳೆದ ಎರಡು ಚುನಾವಣೆ ಸಂದರ್ಭದಲ್ಲಿ ಪಕ್ಷದಲ್ಲಿ ಆದಂತಹ ಎಡವಟ್ಟುಗಳನ್ನು ಸರಿಪಡಿಸಿಕೊಂಡು ನಿಗದಿತ ಗುರಿ ತಲುಪಲಿದ್ಧೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎರಡು ರಾಷ್ಟ್ರೀಯ ಪಕ್ಷಗಳಿಗೆ ಅವರ ಶಕ್ತಿ ಏನು ಎಂಬುದು ಅರಿವಿಗೆ ಬಂದಿದೆ. ಹೀಗಾಗಿ ಜೆಡಿಎಸ್ ಬೆಂಬಲ ಪಡೆಯುವ ಯೋಚನೆ ನಡೆಸಿರುವಂತಿದೆ. ಆದರೆ ಯಾರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಪ್ರಶ್ನೆ ಜೆಡಿಎಸ್ ಮುಂದಿಲ್ಲ. ಯಾರ ತೆಕ್ಕೆಗೂ ಜೆಡಿಎಸ್ ಹೋಗಬಾರದು. ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದರು.
ಜೆಡಿಎಸ್ ಕುಟುಂಬ ರಾಜಕಾರಣದ ಪಕ್ಷ ಎಂಬ ಹಣೆಪಟ್ಟಿಯಿಂದ ಹೊರಬರಬೇಕು. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಲು ತೀರ್ಮಾನಿಸಲಾಗಿದೆ. ಪಕ್ಷದ ಒಳಿತಿಗಾಗಿ ಸಾರ್ವಜನಿಕ ಟೀಕೆ ಬರಬಾರದು. ತಮ್ಮ ಕುಟುಂಬದಿಂದ ಇಬ್ಬರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಪ್ರಜ್ವಲ್ ರೇವಣ್ಣ ಕೂಡಾ ಸ್ಪರ್ಧಾ ಆಕಾಂಕ್ಷಿಯಾಗಿದ್ಧಾರೆ. ಒಟ್ಟಿಗೆ ಕುಳಿತು ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ. ಕುಟುಂಬದಲ್ಲಾಗಲೀ ಪಕ್ಷದಲ್ಲಾಗಲೀ ಯಾವುದೇ ಒಡಕು ಇಲ್ಲ ಎಂದು ಸ್ಪಷ್ಟಪಡಿಸಿದರು.ಉತ್ತರ ಕರ್ನಾಟಕ ಭಾಗದ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸುವಂತೆ ತಮಗೆ ಒತ್ತಡ ಬರುತ್ತಿದ್ದು, ಈ ಕುರಿತು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಆಯ್ಕೆಗೆ ಅವಕಾಶ ಇದೆ. ಚುನಾವಣಾ ಸಂದರ್ಭದಲ್ಲಿ ಆಯ್ಕೆಯನ್ನು ತಿಳಿಸುತ್ತೇನೆ ಎಂದರು.
Comments