ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸದಾನಂದಗೌಡ

ಬೆದರಿಕೆಯೊಡ್ಡಿ ಬಿಜೆಪಿಗೆ ಕರೆಸುವಂತಹ ಅಧೋಗತಿ ಬಿಜೆಪಿಗೆ ಬಂದಿಲ್ಲ, ಅದರ ಅಗತ್ಯವೂ ಇಲ್ಲ ಬೇಡಿಕೆ ಬಾರದೆ ಕೆಂಪು ರತ್ನಗಂಬಳಿ ಹಾಸಿ ಯಾರನ್ನೂ ಸ್ವಾಗತಿಸುವ ಅಗತ್ಯ ಬಿಜೆಪಿಗಿಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡ, ರಾಜ್ಯ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿಗೆ ಸೇರುವಂತೆ ಐಟಿ ಅಧಿಕಾರಿಗಳೇ ಆಹ್ವಾನ ನೀಡಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಆರೋಪಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದರು. ನಗರದ ಹೋಟೆಲ್ ವೊಂದರಲ್ಲಿ ನಡೆಯಲಿರುವ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲು ಇಂದು ಬೆಳಗ್ಗೆ ಆಗಮಿಸಿದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಬಿಜೆಪಿ ಸಿದ್ಧಾಂತದ ಆಕರ್ಷಣೆಯಿಂದ ಹಲವರು ಪಕ್ಷಕ್ಕೆ ಬರುತ್ತಿದ್ದಾರೆ. ಶಂಕರ್ ಸಿಂಗ್ ವಾಘೇಲರಿಂದ ಆರಂಭಿಸಿ ಯೋಗೇಶ್ವರ್ ವರೆಗೆ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಪಕ್ಷಕ್ಕೆ ಯಾರು ಬಂದರೂ ಸ್ವಾಗತಿಸುತ್ತೇವೆ. ಆದರೆ ಬೆದರಿಕೆಯೊಡ್ಡಿ ಬಿಜೆಪಿಗೆ ಕರೆಸುವಂತಹ ಅಧೋಗತಿ ಬಿಜೆಪಿಗೆ ಬಂದಿಲ್ಲ, ಅದರ ಅಗತ್ಯವೂ ಇಲ್ಲ ಎಂದವರು ನುಡಿದರು. ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಚುನಾವಣೆ ಸಂಬಂಧಪಟ್ಟ ವಿಷಯಗಳು ಚರ್ಚೆಯಾಗಲಿವೆ ಎಂದರು.
Comments