ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಹೋಗಲಿ ಸಂಜಯ್ ಪಾಟೀಲ್ ಹೇಳಿಕೆಗೆ ಜಮೀರ್ ಕಿಡಿ

ಟಿಪ್ಪು ಸುಲ್ತಾನ್ ಹಾಗೂ ಸಿದ್ದರಾಮಯ್ಯ ಹುಟ್ಟಿರುವುದು ಕರ್ನಾಟಕದ ಮಣ್ಣಿನಲ್ಲಿ. ಆದರೆ ಬಿಜೆಪಿ ವರಿಷ್ಠ ಎಲ್.ಕೆ.ಅಡ್ವಾಣಿಯಂತೆ ಪಾಕಿಸ್ತಾನದ ಲಾಹೋರ್ನಲ್ಲಿ ಅವರು ಹುಟ್ಟಿಲ್ಲ ಎಂದು ತಿರುಗೇಟು ನೀಡಿದರು.
ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡುವುದಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳಿಕೆ ನೀಡಿದ್ದ ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ್ ಪಾಟೀಲ್ಗೆ, ಜೆಡಿಎಸ್ ಬಂಡಾಯ ಶಾಸಕ ಝಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದ್ದಾರೆ. ಟಿಪ್ಪುಸುಲ್ತಾನ್ ಜಯಂತಿ ಆಚರಣೆಗೆ ಬಿಜೆಪಿ ವಿರೋಧ ಮಾಡುತ್ತಿರುವುದು ಹೊಸದಲ್ಲ. ಅವರು ಎಷ್ಟು ವಿರೋಧ ಮಾಡುತ್ತಾರೋ ಅಷ್ಟೇ ನಮ್ಮಲ್ಲಿ ಉತ್ಸಾಹ ಹೆಚ್ಚುತ್ತಿದೆ. ಸರಕಾರದ ವತಿಯಿಂದ ಇದು ಮೂರನೆ ವರ್ಷದ ಆಚರಣೆ. ಅದಕ್ಕೂ ಮೊದಲಿನಿಂದಲೂ ನಾವು ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ಝಮೀರ್ ಅಹ್ಮದ್ ಹೇಳಿದರು. ಬಿಜೆಪಿಯವರು ಟಿಪ್ಪುಸುಲ್ತಾನ್ ಜಯಂತಿಗೆ ವಿರೋಧ ಮಾಡುತ್ತಿರುವ ಪರಿಣಾಮ ರಾಜ್ಯದ ವಿವಿಧ ಭಾಗಗಳಲ್ಲಿ ಅದ್ದೂರಿಯಾಗಿ ಜಯಂತಿ ಆಚರಣೆಯಾಗುತ್ತಿದೆ. ಇದಕ್ಕಾಗಿ ನಾನು ಬಿಜೆಪಿಯವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇದೀಗ ಮಹಾರಾಷ್ಟ್ರ ಹಾಗೂ ಹೈದರಾಬಾದ್ನಲ್ಲಿಯೂ ಟಿಪ್ಪುಸುಲ್ತಾನ್ ಜಯಂತಿ ಆಚರಿಸಲಾಗುತ್ತಿದೆ ಎಂದರು.
2012ರಲ್ಲಿ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್, ಉಪಮುಖ್ಯಮಂತ್ರಿಯಾಗಿದ್ದ ಆರ್.ಅಶೋಕ್ ಟಿಪ್ಪು ಜಯಂತಿ ಆಚರಿಸಿದ್ದಾರೆ. 2013ರಲ್ಲಿ ಕೆಜೆಪಿ ಕಟ್ಟಿದ್ದ ಯಡಿಯೂರಪ್ಪ ಮುಸ್ಲಿಮರನ್ನು ಓಲೈಸಲು ಟಿಪ್ಪು ಜಯಂತಿ ಆಚರಿಸುವುದಾಗಿ ಹೇಳಿದ್ದರು. ಈಗ ಟಿಪ್ಪು ಜಯಂತಿ ಆಚರಣೆಗೆ ವಿರೋಧಿಸುವ ಯಾವ ನೈತಿಕತೆ ಇವರಿಗಿದೆ ಎಂದು ಪ್ರಶ್ನಿಸಿದರು. ಬಿಜೆಪಿಯವರು ಎಷ್ಟೇ ವಿರೋಧ ಮಾಡಿದರೂ ನಾವು ಟಿಪ್ಪು ಜಯಂತಿ ಆಚರಣೆ ಮಾಡೇ ಮಾಡುತ್ತೇವೆ. ಬ್ಯಾಂಕ್ವೆಟ್ ಹಾಲ್ನಲ್ಲಿ ಸ್ಥಳಾವಕಾಶ ಕೊರತೆ ಇರುವುದರಿಂದ ವಿಧಾನಸೌಧದ ಮುಂಭಾಗದಲ್ಲಿ ನ.10ರಂದು ಸಂಜೆ 5 ಗಂಟೆಗೆ ರಾಜ್ಯಮಟ್ಟದ ಅದ್ದೂರಿ ಸಮಾರಂಭ ನಡೆಯಲಿದೆ ಎಂದು ಝಮೀರ್ ಅಹ್ಮದ್ ಹೇಳಿದರು.
Comments