ಮನೆ ಮನೆಗೆ ಕುಮಾರಣ್ಣ, ಜೊತೆಗೆ ಸುಧಾಕರ್ ಹಠಾವೋ ಚಳುವಳಿ

ನ.15ರ ನಂತರ ಕ್ಷೇತ್ರದಾದ್ಯಂತ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮದ ಜೊತೆಗೆ ಸಂಸದ ವೀರಪ್ಪ ಮೊಯ್ಲಿ ಹಾಗೂ ಶಾಸಕ ಸುಧಾಕರ್ ಹಠಾವೋ ಕಾರ್ಯಕ್ರಮವನ್ನು ಹಮ್ಮಿಕೊಂಡು ಪಕ್ಷ ಸಂಘಟನೆ ಮಾಡಲಾಗುವುದು ಎಂದು ಜೆಡಿಎಸ್ ಮುಖಂಡರು ತಿಳಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ.ನಾಗರಾಜ್, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ನಂದಿ ಆಂಜಿನಪ್ಪಮತ್ತಿತರರು, ಜಿಲ್ಲೆಯ ಜೆಡಿಎಸ್‌ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ ಎಂದರು. ಭ್ರಷ್ಟಾಚಾರದಲ್ಲಿ ತೊಡಗಿರುವ ಶಾಸಕ ಡಾ.ಕೆ.ಸುಧಾಕರ್ ಹಾಗೂ ಮಂಗಳೂರಿನಲ್ಲಿ ಶಕ್ತಿ ಕಳೆದುಕೊಂಡು ಜಿಲ್ಲೆಗೆ ಬಂದಿರುವ ಸಂಸದ ಎಂ.ವೀರಪ್ಪಮೊಯ್ಲಿರನ್ನು ಚಿಕ್ಕಬಳ್ಳಾಪುರದಿಂದ ತೊಲಗಿಸುವಂತೆ ಕ್ಷೇತ್ರದ ಮತದಾರರಲ್ಲಿ ಜನ ಜಾಗೃತಿ ಮೂಡಿಸಿ ಪಕ್ಷವನ್ನು 2018ರ ಚುನಾವಣೆಗೆ ಸಜ್ಜುಗೊಳಿಸಲಾಗುವುದೆಂದರು. ನ.15 ರ ನಂತರ ಜಿಲ್ಲೆಗೆ ರಾಜ್ಯ ನಾಯಕರನ್ನು ಕರೆಸಿ ಬೃಹತ್ ಸಮಾವೇಶದ ಮೂಲಕ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು.
ಇತ್ತೀಚೆಗೆ ಕೆಲವರು ಪಕ್ಷದಲ್ಲಿ ಎಲ್ಲಾ ಅಧಿಕಾರ ಅನುಭವಿಸಿ ಕಾಂಗ್ರೆಸ್ ಸೇರಿದ್ದಾರೆ. ಆದರೆ, ಅವರ ಸೇರ್ಪಡೆಯಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ. ನಾಯಕರು ಪಕ್ಷ ಬಿಟ್ಟು ಹೋಗಿರಬಹುದು. ಆದರೆ, ನಿಷ್ಠಾವಂತ ಕಾರ್ಯಕರ್ತರು ಯಾರು ಕಾಂಗ್ರೆಸ್‌ಗೆ ಹೋಗಿಲ್ಲ ಎಂದು ಆರು ಮಂದಿ ನಗರಸಭೆಯ ಸದಸ್ಯರು ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದ್ದರ ಬಗ್ಗೆ ಮುಖಂಡರು ಪ್ರತಿಕ್ರಿಯಿಸಿದರು.
Comments