ಸಿಎಂ ತವರಲ್ಲಿ ರಣಕಹಳೆ ಮೊಳಗಿಸಿ ಜೆಡಿಎಸ್ ನ ಶಕ್ತಿ ಪ್ರದರ್ಶನ ತೋರಿದ ಎಚ್ ಡಿಕೆ

ಚಾಮುಂಡೇಶ್ವರಿ ಕ್ಷೇತ್ರದ ಜನ ಎಚ್.ಡಿ.ಕುಮಾರಸ್ವಾಮಿಯವರ ಜೇಬಿನಲ್ಲಿಲ್ಲ ಎಂದು ಹೇಳಿರುವುದಕ್ಕೆ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡುವಂತೆ, ಚಾಮುಂಡಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮುಖ್ಯಮಂತ್ರಿ ತವರು ಜಿಲ್ಲೆ ಮೈಸೂರಿನಿಂದಲೇ ಚುನಾವಣಾ ರಣಕಹಳೆ ಮೊಳಗಿಸುವ ಮೂಲಕ ಅಖಾಡ ಪ್ರವೇಶ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡಲಿದ್ದಾರೆಂದು ಹೇಳಲಾಗುತ್ತಿರುವ ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿ ಬೃಹತ್ ಸಮಾವೇಶದ ಮೂಲಕವೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ "ಕರ್ನಾಟಕ ವಿಕಾಸ ವಾಹಿನಿ', ಈ ಯಾತ್ರೆ ಪ್ರಾರಂಭವಾಗುತ್ತಿರುವುದು ವಿಶೇಷ.ಇತ್ತೀಚೆಗೆ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದ ಜನ ಎಚ್.ಡಿ.ಕುಮಾರಸ್ವಾಮಿಯವರ ಜೇಬಿನಲ್ಲಿಲ್ಲ ಎಂದು ಹೇಳಿರುವುದಕ್ಕೆ ಅದೇ ಕ್ಷೇತಕ್ಕೆ ಹೋಗಿ ರಾಜ್ಯದ ಆರು ಕೋಟಿ ಜನ ಸಿದ್ದರಾಮಯ್ಯ ಜೇಬಿನಲ್ಲಿಲ್ಲ ಎಂದು ತಿರುಗೇಟು ನೀಡಲಿದ್ದಾರೆ ಎಂದು ಹೇಳಲಾಗಿದೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆಯೋಜಿಸಿರುವ ಸಮಾವೇಶ ಜೆಡಿಎಸ್‌ನ ಶಕ್ತಿ ಪ್ರದರ್ಶನವೂ ಆಗಿರುವುದರಿಂದ ಮಾಜಿ ಸಚಿವರಾದ ಜಿ.ಟಿ.ದೇವೇಗೌಡ ಹಾಗೂ ಇತ್ತೀಚೆಗಷ್ಟೇ ಪಕ್ಷಕ್ಕೆ ಸೇರ್ಪಡೆಯಾಗಿರುವ ಎಚ್.ವಿಶ್ವನಾಥ್ ಸಮಾವೇಶದ ಉಸ್ತುವಾರಿ ವಹಿಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಜನತಾಪರಿವಾರದ ಮುಖಂಡ ಪಿ.ಜಿ.ಆರ್.ಸಿಂಧ್ಯಾ ಸಹ ಸಮಾವೇಶದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಮೊದಲ ಹಂತದಲ್ಲಿ ಮೂರು ದಿನಗಳ ಕಾಲ ವಿಕಾಸವಾಹಿನಿ ಯಾತ್ರೆ ನಡೆಸಲಿರುವ ಕುಮಾರಸ್ವಾಮಿ, ಚಾಮುಂಡೇಶ್ವರಿ ಕ್ಷೇತ್ರದ ಸಮಾವೇಶದ ನಂತರ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಸಮಾವೇಶ ನಡೆಸಿ ಗ್ರಾಮವಾಸ್ತವ್ಯ ಮಾಡಲಿದ್ದಾರೆ. ಚಿಕ್ಕಮಗಳೂರಿನಲ್ಲಿ ದಲಿತರ ಮನೆಯಲ್ಲಿ ಗ್ರಾಮವಾಸ್ತವ್ಯ ಹೂಡುವುದು ವಿಶೇಷ.
Comments