ನನ್ನ ಫೋನ್ ಕದ್ದಾಲಿಸುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಆರೋಪ

ನಿತ್ಯವೂ ನನ್ನ ಫೋನ್ ಕದ್ದಾಲಿಕೆ ನಡೆಯುತ್ತಿದೆ. ನಾನು ಹೋದೆಡೆ ಬಂದೆಡೆಯಲ್ಲೆಲ್ಲಾ ಫಾಲೋ ಮಾಡಲಾಗುತ್ತಿದೆ. ಫೋನ್ ಕದ್ದಾಲಿಸಲು ಕೆಲವು ಸಂಸ್ಥೆಗಳಿಗೆ ಅಧಿಕಾರವಿದೆ. ಇಂಥವರೇ ಮಾಡಿದ್ದಾರೆ ಎಂದು ಹೇಳಲು ಹೇಗೆ ಸಾಧ್ಯ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ, ಆಸ್ತಿಮುಟ್ಟುಗೋಲು ಎಂಬಿತ್ಯಾದಿ ವಿಷಯಗಳ ಬಗ್ಗೆ ಅನಗತ್ಯವಾಗಿ ವರದಿ ಹಬ್ಬಿಸಲಾಗುತ್ತಿದೆ ಎಂದು ಮಾಧ್ಯಮಗಳ ವಿರುದ್ಧ ಡಿಕೆಶಿ ಗರಂ ಆದರು. ನಾನು ಕನಕಪುರ ಬಂಡೆಯಿಂದ ಬಂದವನು, ಬಂಡೆಗೆ ತಲೆ ಚೆಚ್ಚಿಕೊಂಡರೆ ತಲೆ ಹೊಡೆದುಹೋಗುತ್ತದೆ ಅಷ್ಟೆ, ಬಂಡೆಗೆ ಏನೂ ಆಗುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ನೋಟು ಅಮಾನೀಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾಳೆಗೆ ಈ ನಿರ್ಧಾರ ಕೈಗೊಂಡು ಒಂದು ವರ್ಷವಾಗಲಿದೆ. ನೋಟು ನಿಷೇಧದಿಂದ ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಇದನ್ನು ವಿರೋಧಿಸಿ ಕಾಂಗ್ರೆಸ್ ಕರಾಳ ದಿನ ಆಚರಣೆ ಮಾಡಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಈ ನಿರ್ಧಾರದಿಂದ ಕಪ್ಪು ಹಣ ಹೊರತರಲಾಗಲಿಲ್ಲ. ಭ್ರಷ್ಟಾಚಾರ ನಿಯಂತ್ರಿಸಲಾಗಲಿಲ್ಲ. ಭಯೋತ್ಪಾದನೆ ತಡೆಗಟ್ಟಲು ಸಾಧ್ಯವಾಗಲಿಲ್ಲ ಎಂದರು.
Comments