ಜೆಡಿಎಸ್ ನ ಕರ್ನಾಟಕ ವಿಕಾಸ ಯಾತ್ರೆ ಶುರು

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಾರಥ್ಯದ ‘ಕುಮಾರಪರ್ವ’ ಯಾತ್ರೆಗೆ ನ.7ರಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿಧ್ಯುಕ್ತ ಚಾಲನೆ ದೊರೆಯಲಿದ್ದು, ಆ ಮೂಲಕ ಜೆಡಿಎಸ್ ಕೂಡ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ಆರಂಭಿಸಿದೆ.
ಸಿಎಂ ಸಿದ್ದರಾಮಯ್ಯ ಅವರ ತವರಿನಿಂದಲೇ ಮಹಾಸಮರಕ್ಕೆ ಜೆಡಿಎಸ್ ರಣಕಹಳೆ ಮೊಳಗಿಸಿ, ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ಗೆ ಸೆಡ್ಡು ಹೊಡೆಯಲು ಸಜ್ಜಾಗಿದೆ.ಬೆಳಗ್ಗೆ 7.30ಕ್ಕೆ ಚಾಮುಂಡಿಬೆಟ್ಟ ದಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯಲಿದ್ದಾರೆ. ಬಳಿಕ ಚುನಾವಣಾ ಪ್ರಚಾರಕ್ಕಾಗಿ ತಯಾರಾಗಿರುವ ‘ಕರ್ನಾಟಕ ವಿಕಾಸ ವಾಹಿನಿ’ ವಿಶೇಷ ವಾಹನಕ್ಕೆ ಚಾಲನೆ ನೀಡುವರು.
ಇದೇ ವೇಳೆ 1001 ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ, 101 ಎತ್ತಿನಗಾಡಿಗಳು, 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು, ಕಲಾತಂಡಗಳು, ಬೈಕ್ಗಳ ಮೂಲಕ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 11.30ಕ್ಕೆ ಹುಣಸೂರು ರಸ್ತೆಯಲ್ಲಿರುವ ಲಿಂಗದೇವರಕೊಪ್ಪಲಿನಲ್ಲಿ ‘ಕುಮಾರಪರ್ವ’ ಬೃಹತ್ ಸಮಾವೇಶ ನಡೆಯಲಿದೆ. ಯಾತ್ರೆ ಮಧ್ಯಾಹ್ನ 2.30ಕ್ಕೆ ಚಿಕ್ಕಮಗಳೂರು ಕಡೆ ಪ್ರಯಾಣ ಬೆಳೆಸಲಿದೆ. ಕೆ.ಆರ್.ನಗರ, ಹೊಳೆನರಸೀಪುರ, ಹಾಸನ, ಬೇಲೂರು ಮೂಲಕ ಸಾಗಲಿದ್ದು, ಇಲ್ಲಿ ಸಾರ್ವಜನಿಕರ ಸಭೆ ನಡೆಸಲಾಗುತ್ತದೆ.
ಸಂಜೆ 6.30ಕ್ಕೆ ಚಿಕ್ಕಮಗಳೂರು ನಗರದ ಆಜಾದ್ ಉದ್ಯಾನದಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಲಾಗುತ್ತದೆ. ನಂತರ, ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಂಜೆ 7.30ಕ್ಕೆ ಮುಗುಳವಳ್ಳಿಯಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.ಕುಮಾರಸ್ವಾಮಿ ಮತ್ತೆ ಗ್ರಾಮ ವಾಸ್ತವ್ಯ ಆರಂಭಿಸಿದ್ದು, ಚಿಕ್ಕಮಗಳೂರು ತಾಲೂಕಿನ ಮುಗಳವಳ್ಳಿಯಲ್ಲಿ ಮಂಗಳವಾರ ವಾಸ್ತವ್ಯ ಮಾಡಲಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದು ಎರಡನೇ ಗ್ರಾಮ ವಾಸ್ತವ್ಯ.
ಮಾಜಿ ಸಿಎಂ ಕುಮಾರಸ್ವಾಮಿ ಕೈಗೊಂಡಿರುವ ಕರ್ನಾಟಕ ವಿಕಾಸ ಯಾತ್ರೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಾಥ್ ನೀಡಲಿದ್ದಾರೆ. ಮಂಗಳವಾರ ಚಾಮುಂಡಿ ತಾಯಿ ಆಶೀರ್ವಾದ ಪಡೆದು ಯಾತ್ರೆಗೆ ಚಾಲನೆ ನೀಡಲಾಗುವುದು. ಉತ್ತರ ಕರ್ನಾಟಕಕ್ಕೂ ಆದ್ಯತೆ ನೀಡಲಾಗುವುದು. ನ.17ರಂದು ಬೆಳಗಾವಿಯಲ್ಲಿ ನಡೆಯಲಿರುವ ವಿಕಾಸ ಯಾತ್ರೆಯಲ್ಲಿ ಭಾಗವಹಿಸುತ್ತೇನೆ ಎಂದರು.ಕರ್ನಾಟಕ ವಿಕಾಸ ಯಾತ್ರೆ ನನ್ನ ಬದುಕಿನ ಎರಡನೇ ಹೋರಾಟದ ಹೆಜ್ಜೆ. ಜೆಡಿಎಸ್ ಬಲ ಏನು ಎಂಬುದನ್ನು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ತೋರಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ ನಾಡಿನ ಜನ ಜೆಡಿಎಸ್ ಬೆಂಬಲಿಸಲಿದ್ದಾರೆ. ಸ್ವತಂತ್ರ ಬಲದಿಂದ ಅಧಿಕಾರಕ್ಕೆ ಬರಲಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
Comments