ವಿಧಾನಸಭಾ ಚುನಾವಣೆ : ದೇವೇಗೌಡರ ಕುಟುಂಬದಿಂದ ನಾಲ್ವರು ಸ್ಪರ್ಧೆ

ಜೆಡಿಎಸ್ ವರಿಷ್ಠ ನಾಯಕ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬದಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾಲ್ವರು ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ.
ತಮ್ಮ ಕುಟುಂಬದಿಂದ ಇಬ್ಬರೇ ಸ್ಪರ್ಧಿಸಲಿದ್ದಾರೆ ಎಂದು ದೇವೇಗೌಡರು ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಪದೇ ಪದೇ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದರೂ ಕುಟುಂಬದ ಆಂತರಿಕ ಬೆಳವಣಿಗೆಗಳನ್ನು ಗಮನಿಸಿದರೆ ಅವರ ಕೈಮೀರಿ ಅದು ನಾಲ್ಕಕ್ಕೆ ಬಂದು ನಿಲ್ಲುವ ಸಂದರ್ಭ ಎದುರಾಗುವ ಸಂಭವವಿದೆ.
ಹಾಲಿ ಶಾಸಕರೂ ಆಗಿರುವ ದೇವೇಗೌಡರ ಮಕ್ಕಳಾದ ಕುಮಾರಸ್ವಾಮಿ ಮತ್ತು ಎಚ್.ಡಿ.ರೇವಣ್ಣ ಅವರಿಬ್ಬರು ಕಣಕ್ಕಿಳಿಯಲಿದ್ದಾರೆ. ಆದರೆ, ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದಿಂದ ಮಾಜಿ ಶಾಸಕಿಯೂ ಆಗಿರುವ ಕುಮಾರಸ್ವಾಮಿ ಪತ್ನಿ ಅನಿತಾ ಅವರನ್ನು ಕಣಕ್ಕಿಳಿಸುವ ಪ್ರಯತ್ನ ತೆರೆಮರೆಯಲ್ಲಿ ಭರದಿಂದ ನಡೆದಿರುವ ಬೆನ್ನಲ್ಲೇ ರೇವಣ್ಣ ಪುತ್ರ ಪ್ರಜ್ವಲ್ ಕೂಡ ತಾವು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಪಟ್ಟು ಹಿಡಿದಿದ್ದಾರೆ.
ಇದಕ್ಕೆ ಪೂರಕವಾಗಿ ಎಂಬಂತೆ ಮಾತನಾಡಿದ ರೇವಣ್ಣ ಪತ್ನಿ ಭವಾನಿ ಅವರು ಪುತ್ರ ಪ್ರಜ್ವಲ್ ರೇವಣ್ಣ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.'ಪ್ರಜ್ವಲ್ ಹಾಸನ ಜಿಲ್ಲೆಯ ಬೇಲೂರು ಅಥವಾ ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೇ ಎಂಬುದನ್ನು ಸಮೀಕ್ಷೆ ನಡೆಸಿ ದೇವೇಗೌಡರು ತೀರ್ಮಾನಿಸಲಿದ್ದಾರೆ. ಅನಿತಾ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ನಾನೇನು ಮಾತನಾಡಲ್ಲ. ಚುನಾವಣೆಗೆ ನಿಲ್ಲುವುದು ಅವರಿಗೆ ಬಿಟ್ಟ ವಿಚಾರ. ಅಂತಿಮವಾಗಿ ಕುಟುಂಬದ ಹಿರಿಯರು ನಿರ್ಧರಿಸಲಿದ್ದಾರೆ' ಎಂದರು.
ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಮೊಮ್ಮಗ ಪ್ರಜ್ವಲ್ನನ್ನು ಮುಂಬರುವ ೨೦೧೯ರ ಲೋಕಸಭಾ ಚುನಾವಣೆಗೆ ತಮ್ಮ ಉತ್ತರಾಧಿಕಾರಿಯನ್ನಾಗಿ ಕಣಕ್ಕಿಳಿಸಲು ಆಸಕ್ತಿ ಇದ್ದರೂ ಪ್ರಜ್ವಲ್ಗೆ ಮಾತ್ರ ಸದ್ಯಕ್ಕೆ ರಾಜ್ಯ ರಾಜಕಾರಣದಲ್ಲೇ ಮುಂದುವರೆಯುವ ಆಸೆಯಿರುವುದೇ ಈ ಬಿಕ್ಕಟ್ಟಿಗೆ ಮೂಲ ಕಾರಣ.
Comments