ಸಿದ್ದರಾಮಯ್ಯ ಪ್ರಧಾನಿಯಾಗೋ ಕನಸು ಕಾಣುತ್ತಿದ್ದಾರೆ : ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ವ್ಯಂಗ್ಯ

ಈ ಹಿಂದೆ ಕಾಂಗ್ರೆಸ್‍ನಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರು ಹಂತಹಂತವಾಗಿ ಬೆಳೆದರು. ಒಂದು ಹಂತದಲ್ಲಿ ಪ್ರಧಾನಿಯಾಗುವ ಮಟ್ಟಕ್ಕೂ ಬೆಳೆದಿದ್ದರು. ಇದನ್ನು ಕಂಡಂತಹ ಇಂದಿರಾಗಾಂಧಿಯವರು ದೇವರಾಜ ಅರಸು ಅವರನ್ನು ಮಟ್ಟ ಹಾಕಿದರು. ಈಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವ ಸೋನಿಯಾಗಾಂಧಿಯವರಿಗಾಗಲಿ, ಉಪಾಧ್ಯಕ್ಷ ರಾಹುಲ್‍ಗಾಂಧಿಯವರಿಗಾಗಲಿ ಸಿದ್ದರಾಮಯ್ಯ ಅವರನ್ನು ಎದುರಿಸುವ ಶಕ್ತಿ ಇಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಪ್ರಧಾನಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ವ್ಯಂಗ್ಯವಾಡಿದರು. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸಿದ್ದರಾಮಯ್ಯನವರು ಮೊದಲು ಶಾಸಕರಾದರು, ವಿಪಕ್ಷನಾಯಕರಾದರು, ಅನಂತರ ಹಣಕಾಸು ಸಚಿವರಾದರು, ಉಪಮುಖ್ಯಮಂತ್ರಿಯಾದರು, ಈಗ ಮುಖ್ಯಮಂತ್ರಿಯಾಗಿದ್ದಾರೆ. ಅವರು ಅಂದುಕೊಂಡಿದ್ದೆಲ್ಲ ಆಗಿದ್ದಾರೆ. ಇದೀಗ ಅವರ ಕಣ್ಣು ಪ್ರಧಾನಿ ಹುದ್ದೆ ಮೇಲೆ ಬಿದ್ದಿದೆ ಎಂದು ಹೇಳಿದರು.
ಸಿದ್ದರಾಮಯ್ಯನವರು ಪ್ರತಿನಿತ್ಯ ಪ್ರಧಾನಿ ಮೋದಿಯವರನ್ನು ಟೀಕಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಈ ಮೂಲಕ ಪ್ರಧಾನಿ ಹುದ್ದೆಗೇರುವ ಕನಸು ಕಾಣುತ್ತಿದ್ದಾರೆ ಎಂದು ಟೀಕಿಸಿದರು. ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಿ.ಟಿ.ದೇವೇಗೌಡ, ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೋ, ಇಲ್ಲವೋ ಗೊತ್ತಿಲ್ಲ. ನಾನಂತೂ ಈ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ. ಇಲ್ಲಿನ ಜನತೆ ನನ್ನ ಕೈ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Comments