ಜೆಡಿಎಸ್‌ಗೆ ಜಿಗಿಯಲು ಹಲವು ಶಾಸಕರ ಸಿದ್ಧತೆ?
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆಯನ್ನು ಮನಗಂಡು ಆತಂಕದಲ್ಲಿರುವ ಕೆಲವು ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲ ಶಾಸಕರು, ಜೆಡಿಎಸ್ ತೆಕ್ಕೆಗೆ ಜಿಗಿಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಆಡಳಿತಾರೂಢ ಕಾಂಗ್ರೆಸ್ ಹಾಗೂ ಅಧಿಕೃತ ಪ್ರತಿಪಕ್ಷ ಬಿಜೆಪಿಗೆ 2018ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿಯುವಷ್ಟು ಶಾಸಕರ ಸಂಖ್ಯಾಬಲ ದೊರಕುವುದು ಅನುಮಾನ ಎಂಬ ‘ ಗ್ರೌಂಡ್ ರಿಯಾಲಿಟಿ ’ ಅರ್ಥ ಮಾಡಿಕೊಂಡಿರುವ ಎರಡೂ ಪಕ್ಷಗಳಲ್ಲಿನ ಕೆಲವು ಶಾಸಕರು ಜೆಡಿಎಸ್‌ನತ್ತ ಮುಖಮಾಡಿದ್ದಾರೆ ಎನ್ನಲಾಗಿದೆ.ಈ ಬಾರಿ ರಾಜ್ಯದ ಜನತೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಅಷ್ಟಾಗಿ ಒಲವು ತೋರದೆ, ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ ಬೆಂಬಲಿಸಿದರೆ, ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿ ಗದ್ದುಗೆ ಏರಲಿದ್ದಾರೆ ಎಂಬ ನಾಡಿಮಿಡಿತ ಹಿಡಿದಿರುವ ಕೆಲ ಶಾಸಕರು ಆ ಪಕ್ಷ ಸೇರುವ ಚಿಂತನೆಯಲ್ಲಿದ್ದಾರೆ. ಚುನಾವಣೆಗೆ ಇನ್ನೂ ಐದಾರು ತಿಂಗಳು ಇರುವುದರಿಂದ ತಮ್ಮ ಮನದಾಳವನ್ನು ಬಹಿರಂಗಪಡಿಸದೆ ಶಾಸಕರು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆನ್ನಲಾಗಿದೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡರ ಮಧ್ಯಸ್ಥಿಕೆಯಿಂದ ಜನತಾ ಪರಿವಾರದ ನಾಯಕರಲ್ಲೊಬ್ಬರಾಗಿದ್ದ ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯಾ ಅವರನ್ನು ಪಕ್ಷಕ್ಕೆ ಕರೆತರಲಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲವು ಶಾಸಕರು, ಜೆಡಿಎಸ್ ಸೇರ್ಪಡೆಗೆ ಆಪ್ತ ಸಮಾಲೋಚನೆಯಲ್ಲಿ ತೊಡಗಿದ್ದಾರೆ. ಮಧುಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎನ್ ರಾಜಣ್ಣ ಅವರು, ಮುಂದಿನ ಚುನಾವಣೆ ವೇಳೆಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗುವ ಬಗ್ಗೆ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.ಬೆಳಗಾವಿ ಜಿಲ್ಲಾ ಘಟಕ ಬಿಜೆಪಿಯಲ್ಲಿ ಆತಂಕ ಬೇಗುದಿ ಹೆಚ್ಚಾಗಿದ್ದು, ಜಿಲ್ಲೆಯ ಕೆಲವು ಶಾಸಕರು, ಜೆಡಿಎಸ್ ಸೇರ್ಪಡೆಗೆ ತೆರೆಮರೆಯಲ್ಲಿ ಮಾತುಕತೆ ಆರಂಭಿಸಿದ್ದಾರೆ. ಜಿಲ್ಲಾ ಬಿಜೆಪಿ ಮೇಲೆ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಹಿಡಿತ ಸಡಿಲಗೊಂಡಿದೆ ಎಂಬುದನ್ನು ಅರಿತಿರುವ ಈ ಭಾಗದ ಪ್ರಭಾವಿ ಮುಖಂಡರೂ ಆಗಿರುವ ಮಾಜಿ ಸಚಿವ ಉಮೇಶ್ ಕತ್ತಿ, ಮತ್ತೊಬ್ಬ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಮತ್ತಿತರರು ಜೆಡಿಎಸ್‌ಗೆ ಸೇರ್ಪಡೆ ಕುರಿತು ಸಮಾಲೋಚನೆಯಲ್ಲಿ ತೊಡಗಿದ್ದಾರೆಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್‌ಗೆ ಸೆಡ್ಡು ಹೊಡೆದಿರುವ ಶಾಸಕ ಎ.ಎಸ್ ನಡಹಳ್ಳಿ, ಕುಮಾರಸ್ವಾಮಿ ಅವರನ್ನು ಮುಂದಿನ ಮುಖ್ಯಮಂತ್ರಿ ಮಾಡಬೇಕೆಂಬ ಸಂಕಲ್ಪದೊಂದಿಗೆ, ಆ ಭಾಗದಲ್ಲಿ ಪಕ್ಷದ ಸಂಘಟನೆ ಬಲಪಡಿಸಲು ಮುಂದಾಗಿದ್ದಾರೆ.ಮೂಲಗಳ ಪ್ರಕಾರ, ಚುನಾವಣೆ ಹತ್ತಿರಕ್ಕೆ ಬಂದಾಗ, ಪಕ್ಷ ಸೇರ್ಪಡೆಯಾಗಬೇಕೆಂದು ನಿರ್ಧರಿಸಿಸುವವರ ಪಟ್ಟಿ ದೊಡ್ಡದಿದೆ. ಕೇವಲ ಜನತಾಪರಿವಾರದ ನಾಯಕರಷ್ಟೇ ಈ ಪಟ್ಟಿಯಲ್ಲಿಲ್ಲ. ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಬೇಕೆಂದು ಹವಣಿಸುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರೂ ಇದರಲ್ಲಿ ಇದ್ದಾರೆ ಎನ್ನಲಾಗಿದೆ.
Comments