ಬಿಜೆಪಿ ಯಾತ್ರೆಗೆ ಸೆಡ್ಡು ಹೊಡೆಯಲು ಕೈ ಪಕ್ಷದಿಂದ ರಾಹುಲ್ ಜನಾಶೀರ್ವಾದ ಯಾತ್ರೆ
ಮುಂಬರುವ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟು ಬಿಜೆಪಿ ಆರಂಭಿಸಿರುವ 'ಪರಿವರ್ತನಾ ಯಾತ್ರೆ'ಗೆ ಪ್ರತಿಯಾಗಿ ರಾಜ್ಯದಾದ್ಯಂತ ಎರಡು ಯಾತ್ರೆಗಳನ್ನು ಕೈಗೊಳ್ಳಲು ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ತೀರ್ಮಾನಿಸಿದೆ.
ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯಾತ್ರೆಗಳ ನೇತೃತ್ವದ ವಹಿಸಲಿದ್ದಾರೆ. ಬಿಜೆಪಿ ಯಾತ್ರೆ ಮೀರಿಸುವ ಮಾದರಿಯಲ್ಲಿ ಈ ಯಾತ್ರೆಗಳನ್ನು ಆಯೋಜಿಸಲು ಪಕ್ಷದ ವಲಯದಲ್ಲಿ ಚರ್ಚೆ ಆರಂಭಗೊಂಡಿದೆ.ಈ ಯಾತ್ರೆಗಳ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಸಾಧನೆಗಳು, ರಾಜ್ಯದಲ್ಲಿ 2008ರಲ್ಲಿ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ಮತ್ತು ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ವೈಫಲ್ಯಗಳ ಕುರಿತು ಮತದಾರರಿಗೆ ಮನವರಿಕೆ ಮಾಡಿಕೊಡಲು ಕಾಂಗ್ರೆಸ್ ಉದ್ದೇಶಿಸಿದೆ.
'ಜನಾಶೀರ್ವಾದ ಯಾತ್ರೆ' ಹೆಸರಿನಲ್ಲಿ ಡಿ. 15ರಿಂದ ಜ. 15ರವರೆಗೆ ಒಂದು ತಿಂಗಳು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ತೀರ್ಮಾನಿಸಿದ್ದಾರೆ. ಆದರೆ, ಕೆಪಿಸಿಸಿ ವತಿಯಿಂದ ಕೈಗೊಳ್ಳುವ ಯಾತ್ರೆಯ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ.ಈ ಎರಡೂ ಯಾತ್ರೆಗಳು ಆರಂಭಗೊಳ್ಳುವಷ್ಟರಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ, ಈ ಎರಡೂ ಯಾತ್ರೆಗಳಿಗೆ ರಾಹುಲ್ ಅವರನ್ನು ಆಹ್ವಾನಿಸಲು ಪಕ್ಷದ ಮುಖಂಡರು ತೀರ್ಮಾನಿಸಿದ್ದು, ಆ ಮೂಲಕ ಬಿಜೆಪಿಗೆ ಸಡ್ಡು ಹೊಡೆಯಲು ಮುಂದಾಗಿದ್ದಾರೆ.ಎರಡೂ ಯಾತ್ರೆಗಳ ರೂಪುರೇಷೆ ಹೇಗಿರಬೇಕು, ಎಲ್ಲೆಲ್ಲಿ ಯಾತ್ರೆ ಮಾಡಬೇಕು ಎಂಬ ಬಗ್ಗೆ ಪಕ್ಷದ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಜೊತೆ ಮುಂದಿನ ವಾರ ಚರ್ಚಿಸಲು ಪಕ್ಷದ ಪ್ರಮುಖರು ತೀರ್ಮಾನಿಸಿದ್ದಾರೆ. ಕೆಪಿಸಿಸಿ ವತಿಯಿಂದ ಹಮ್ಮಿಕೊಳ್ಳುವ ಯಾತ್ರೆ ದಿನ ಕೂಡಾ ಈ ಚರ್ಚೆ ಸಂದರ್ಭದಲ್ಲಿ ಅಂತಿಮಗೊಳ್ಳಲಿದೆ' ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಕ್ಷ ಕೈಗೊಂಡಿರುವ ಮನೆ ಮನೆ ಕಾಂಗ್ರೆಸ್ ಅಭಿಯಾನ ಇನ್ನೂ ಪೂರ್ಣಗೊಂಡಿಲ್ಲ. ಕಲಬುರ್ಗಿ ಮತ್ತು ಬೆಂಗಳೂರು ವಿಭಾಗದ ಮನೆ ಮನೆ ಕಾಂಗ್ರೆಸ್ ಅಭಿಯಾನದ ಪರಿಶೀಲನೆ ಬಾಕಿ ಇದೆ. ಹೀಗಾಗಿ ಕೆಪಿಸಿಸಿ ಯಾತ್ರೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ.ಪರಿವರ್ತನಾ ಯಾತ್ರೆಗೆ ಬಿಜೆಪಿ ನಿರೀಕ್ಷೆ ಮಾಡಿದಷ್ಟು ಜನ ಸೇರಿಲ್ಲ. ಕಾಂಗ್ರೆಸ್ ಪಕ್ಷದ ಕಡೆಗೆ ಜನರ ಒಲವು ಇರುವುದರ ಪ್ರತೀಕವಿದು ಎಂದು ಈಗಾಗಲೇ ಮುಖ್ಯಮಂತ್ರಿ ಹೇಳಿದ್ದಾರೆ. ಅದಕ್ಕೆ ಪೂರಕವಾಗಿ ಜನಾರ್ಶೀವಾದ ಯಾತ್ರೆಗೆ ಬೃಹತ್ ಸಂಖ್ಯೆಯಲ್ಲಿ ಜನರನ್ನು ಸೇರಿಸಿ, ಮತದಾರರು ಕಾಂಗ್ರೆಸ್ ಪರ ಇದ್ದಾರೆ ಎಂಬ ಸಂದೇಶ ರವಾನಿಸಲು ಚಿಂತನೆ ನಡೆದಿದೆ' ಎಂದೂ ಮೂಲಗಳು ತಿಳಿಸಿವೆ.ಪರಿವರ್ತನಾ ಯಾತ್ರೆಯಿಂದ ನಮಗೆ ಲಾಭ': 'ಮುಖ್ಯಮಂತ್ರಿ ಧಿಮಾಕಿನಿಂದ ಮಾತನಾಡುತ್ತಿದ್ದಾರೆ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಾಡಿದ ಆರೋಪಕ್ಕೆ ಶುಕ್ರವಾರ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 'ಚುನಾವಣೆಯಲ್ಲಿ ಜನ ಬಿಜೆಪಿಯನ್ನು ಸೋಲಿಸಿ, ಯಡಿಯೂರಪ್ಪ ಅವರನ್ನು ಮನೆಗೆ ಕಳುಹಿಸಿದ್ದಾರೆ. ಆದರೂ ಅವರಿಗೆ ಬುದ್ಧಿ ಬಂದಿಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರು ಪರಿವರ್ತನಾ ಯಾತ್ರೆ ಹೋಗುವುದರಿಂದ ನಮ್ಮ ಪಕ್ಷಕ್ಕೆ ಹೆಚ್ಚು ಲಾಭವಾಗಲಿದೆ' ಎಂದರು.
ಟಿಪ್ಪು ಜಯಂತಿ ಕುರಿತು ಕೇಳಿದ ಪ್ರಶ್ನೆಗೆ, 'ಟಿಪ್ಪು ಸುಲ್ತಾನ್ ಅಪ್ರತಿಮ ಹೋರಾಟಗಾರ ಹಾಗೂ ಸ್ವಾತಂತ್ರ್ಯ ಹೋರಾಟಗಾರನಾಗಿದ್ದ. ಟಿಪ್ಪು ಸಾಹಸವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರೇ ಮೆಚ್ಚಿ, ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಬಿಜೆಪಿಯವರಿಗೆ ಇತಿಹಾಸ ಗೊತ್ತಿಲ್ಲ. ಇತಿಹಾಸ ತಿಳಿದು ಮಾತನಾಡಲಿ' ಎಂದು ಹೇಳಿದರು.ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾನ ನಮ್ಮ ಹಕ್ಕು ಹಾಗೂ ನಮ್ಮ ಪಾಲು. ಅದು ಬಳಕೆ ಆಗದಿದ್ದರೆ ವಿಧಾನಮಂಡಲ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರು ಪ್ರಶ್ನಿಸಲಿ ಎಂದು ತಿರುಗೇಟು ನೀಡಿದರು.ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ₹ 1000 ಮತ್ತು ₹ 500 ಹಳೆ ನೋಟುಗಳನ್ನು ರದ್ದುಪಡಿಸಿ ಇದೇ 8ಕ್ಕೆ ಒಂದು ವರ್ಷ ತುಂಬಲಿದೆ. ನೋಟು ರದ್ದತಿ ಹಿಂದಿನ ಉದ್ದೇಶ ವಿಫಲವಾಗಿದೆ ಎಂದು ಆರೋಪಿಸಿ ಅಂದು ರಾಜ್ಯ ಎಲ್ಲ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಕರಾಳ ದಿನ' ಆಗಿ ಆಚರಿಸಲು ಕೆಪಿಸಿಸಿ ನಿರ್ಧರಿಸಿದೆ.ನೋಟು ರದ್ದತಿಯಿಂದ ಆಗಿರುವ ಜನರಿಗೆ ಆಗಿರುವ ಸಮಸ್ಯೆಗಳಿಗೆ ಯಾರು ಹೊಣೆ?' ಎಂಬ ಪ್ರಶ್ನೆ ಮುಂದಿಟ್ಟು ಅಂದು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಎಐಸಿಸಿಯಿಂದ ಸೂಚನೆ ಬಂದಿದೆ' ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದರು.
Comments