ಕುಮಾರಪರ್ವ ಯಾತ್ರೆಗೆ ‘ಕರ್ನಾಟಕ ವಿಕಾಸ ವಾಹಿನಿ’ ನಾಮಕರಣ
ರಾಜ್ಯ ವಿಧಾನಸಭೆಗೆ ಸಿದ್ಧವಾಗುತ್ತಿರುವ ಎಲ್ಲಾ ಪ್ರಮುಖ ಪಕ್ಷಗಳಲ್ಲಿ ರ್ಯಾಲಿ ಪರ್ವ ಶುರುವಾಗಿದ್ದು' ಬಿಜೆಪಿಯ ಪರಿವರ್ತನಾ ಯಾತ್ರೆ, ಕಾಂಗ್ರೆಸ್‌ನ ಜನಾಶೀರ್ವಾದ ಯಾತ್ರೆ ಜೊತೆಗೆ ಜೆಡಿಎಸ್ ಪಕ್ಷವು "ಮನೆಮನೆಗೆ ಕುಮಾರಣ್ಣ' ಅಭಿಯಾನದ ಜೊತೆಗೆ ನಡೆಸಲಿರುವ ಕುಮಾರಪರ್ವ ಯಾತ್ರೆಗೆ "ಕರ್ನಾಟಕ ವಿಕಾಸ ವಾಹಿನಿ' ಎಂದು ನಾಮಕರಣ ಮಾಡಲಾಗಿದೆ.
"'ಕರ್ನಾಟಕ ವಿಕಾಸ ವಾಹಿನಿ' ಯಾತ್ರೆಗೆ ವಿಶೇಷ ಬಸ್ ಸಿದ್ಧಗೊಂಡಿದ್ದು, ನವೆಂಬರ್ 7ರಿಂದ ಚಾಮುಂಡೇಶ್ವರಿ ಕ್ಷೇತ್ರದಿಂದ ಚಾಲನೆ ದೊರೆಯಲಿದೆ. ಯಾತ್ರೆಯ ನಾಯಕತ್ವ ವಹಿಸಲಿರುವ ಎಚ್.ಡಿ.ಕುಮಾರಸ್ವಾಮಿ ಯಾತ್ರೆ ಜತೆಗೆ ಗ್ರಾಮವಾಸ್ತವ್ಯ ನಡೆಸುವುದು ವಿಶೇಷ. ಜೆಪಿ ನಗರ ನಿವಾಸದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ,ಮುಂಬರುವ ವಿಧಾನಸಭೆ ಚುನಾವಣಾ ಪ್ರಚಾರ ಯಾತ್ರೆಗೆ "ಕರ್ನಾಟಕ ವಿಕಾಸ ವಾಹಿನಿ' ಎಂದು ನಾಮಕರಣ ಮಾಡಲಾಗಿದ್ದು, ರಾಜ್ಯದ 224 ಕ್ಷೇತ್ರಗಳಲ್ಲಿ ಸಂಚರಿಸಲಿದೆ ಎಂದು ಹೇಳಿದರು.
ಯಾತ್ರೆಗಾಗಿ ಸಿದ್ಧಪಡಿಸಿರುವ ವಿಶೇಷ ಬಸ್‌ನಲ್ಲಿ ಪಕ್ಷದ ನಾಯಕರ ಜತೆ ಪ್ರವಾಸ ಕೈಗೊಳ್ಳಲಾಗುವುದು. ನ.7ರಂದು
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಯಾತ್ರೆಗೆ ಚಾಲನೆ ದೊರೆಯಲಿದ್ದು, ಚಾಮುಂಡೇಶ್ವರಿ ಕ್ಷೇತ್ರದ ನಂತರ ಕೆ.ಆರ್.ನಗರ, ಹೊಳೇನರಸೀಪುರ, ಹಾಸನ, ಬೇಲೂರು ಮಾರ್ಗವಾಗಿ ಚಿಕ್ಕಮಗಳೂರಿಗೆ ತಲುಪಿ ಅಂದು ಸಂಜೆ ಬೃಹತ್ ಸಮಾವೇಶ ಮಾಡಲಾಗುವುದು. ಅದೇ ದಿನ ಅಲ್ಲಿ ಗ್ರಾಮವಾಸ್ತವ್ಯ ಮಾಡಲಾಗುವುದು. ಮರುದಿನ ನ.8ರಂದು ತರೀಕೆರೆಯಲ್ಲಿ ಬಹಿರಂಗ ಸಭೆ ನಡೆಸಿ ಸಂಜೆ ಶಿವಮೊಗ್ಗದಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದೇನೆ. ನಂತರ ರಾತ್ರಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭೆ ಕ್ಷೇತ್ರದಲ್ಲಿ ಗ್ರಾಮವಾಸ್ತವ್ಯ ಮಾಡಲಾಗುವುದು ಎಂದು ಹೇಳಿದರು.
ನ.9ರಂದು ಚೆನ್ನಗಿರಿಯಲ್ಲಿ ಬಹಿರಂಗ ಸಮಾವೇಶ, ಸಂಜೆ ಹರಿಹರ ಕ್ಷೇತ್ರದಲ್ಲಿ ಸಭೆ ನಡೆಸಿ ಬೆಂಗಳೂರಿಗೆ ವಾಪಸ್ಸಾಗಲಾಗುವುದು. ಮೊದಲ ಹಂತದ ಪ್ರವಾಸ ಮೂರು ದಿನ ನಡೆಯಲಿದೆ. ನ.13ಕ್ಕೆ ಬೆಳಗಾವಿಯಲ್ಲಿ ಆಯೋಜಿಸಿರುವ ರೈತ ಸಮಾವೇಶದಲ್ಲಿ 1 ಲಕ್ಷ ರೈತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.ವಿದ್ಯುತ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಸದನ ಸಮಿತಿಯಿಂದ ಸತ್ಯಾಂಶದ ವರದಿ ನಿರೀಕ್ಷೆ ಮಾಡಲಾಗದು. ತೇಪೆ ಹಾಕುವ ಕೆಲಸ ಮಾಡಬಹುದು ಅಷ್ಟೇ. ಹೀಗಾಗಿ, ಆ ವರದಿಗೆ ಸಹಿ ಹಾಕುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಎಚ್‌ಡಿಕೆ ಉತ್ತರಿಸಿದರು.ಶನಿವಾರ ಜೆಡಿಎಸ್ ಕೋರ್ ಕಮಿಟಿ ಸಭೆ ನಡೆಯಲಿದ್ದು, ಯಾತ್ರೆ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚಿಸಿ ಕೆಲವು ಪ್ರಮುಖ ತೀರ್ಮಾನ ಕೈಗೊಳ್ಳಲುವ ಸಾಧ್ಯತೆಯಿದೆ.
Comments