ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ತಿರುಗೇಟು ಕೊಟ್ಟ ಎಚ್ ಡಿಕೆ
ಸಿ.ಪಿ.ಯೋಗೇಶ್ವರ್ಗೆ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಟಿಕೆಟ್ ತಪ್ಪಲು ದೇವೇಗೌಡರು ಕಾರಣರಲ್ಲ. ರಾಜಕೀಯ ಲಾಭಕ್ಕಾಗಿ ಯೋಗೇಶ್ವರ್ ಇಂಥ ಹೇಳಿಕೆ ನೀಡುತ್ತಿದ್ದಾರೆ. ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯ ನಮಗಿಲ್ಲ. ದೇವೇಗೌಡರು ಅಂತಹ ರಾಜಕೀಯ ಮಾಡುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಿಎಂ ಆಗಿ ಅವರು ಮಾಡುತ್ತಿರುವ ಪದ ಬಳಕೆ, ಪ್ರತಿಕ್ರಿಯೆ ನೀಡುವಾಗಿನ ಬಾಡಿ ಲಾಂಗ್ವೆಜ್, ನಡವಳಿಕೆ ಅನ್ಫಿಟ್ ಎನಿಸುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿ, ಜೈಲಿಗೆ ಹೋಗಿ ಬಂದವರು, ಸದನದಲ್ಲಿ ಅಶ್ಲೀಲ ಚಿತ್ರ ನೋಡಿ ಬಂದವರು, ಲೂಟಿ ಮಾಡಿದವರು ಎಂದು ಪ್ರತಿದಿನ ಸಿಎಂ ಭಾಷಣ ಮಾಡುತ್ತಾರೆ. ಯಾವ ಪ್ರಕರಣದಲ್ಲಿ ಅವರು ಕ್ರಮ ಕೈಗೊಂಡಿದ್ದಾರೆಂದು ಹೇಳಲಿ ಎಂದು ಪ್ರಶ್ನಿಸಿದರು.
ನಿಮ್ಮ ಕಾಲದಲ್ಲಿ ಬೇಲೆಕೇರಿ ಪ್ರಕರಣದಲ್ಲಿ ಲಕ್ಷ ಕೋಟಿ ರೂ. ಲೂಟಿಯಾಗಿದೆ ಎಂದು ಸಾರ್ವಜನಿಕ ಸಭೆಗಳಲ್ಲಿ ಯಡಿಯೂರಪ್ಪ ಅವರನ್ನು ಸಿಎಂ ಆರೋಪಿಸುತ್ತಾರೆ. ಅಷ್ಟೊಂದು ಲೂಟಿಯಾಗಿದ್ದರೆ ಆ ವಿಚಾರವನ್ನು ಸಂತೆ ಭಾಷಣಕ್ಕೆ ಉಪಯೋಗಿಸಿಕೊಳ್ಳುವುದಲ್ಲ. ಮೊದಲು ತನಿಖೆ ನಡೆಸಲಿ. ಆರೂವರೆ ಕೋಟಿ ಜನರ ದುಡ್ಡು ರಕ್ಷಿಸಲಿ ಎಂದ ಎಚ್ಡಿಕೆ, ಬಿಜೆಪಿ ಸರ್ಕಾರದ ಅವಧಿಯಲ್ಲಿನ ಯಾವ ಪ್ರಕರಣವನ್ನೂ ನಾಲ್ಕು ವರ್ಷದಲ್ಲಿ ಪತ್ತೆ ಮಾಡಿಲ್ಲ. ಆ ಧೈರ್ಯವೂ ಸಿದ್ದರಾಮಯ್ಯಗೆ ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಜೆಡಿಎಸ್ ಬಗ್ಗೆ ಸಿದ್ದರಾಮಯ್ಯ ಅವರಿಗೂ ಭಯ ಇದೆ, ಬಿಜೆಪಿಗೂ ಭಯವಿದೆ. ಸಿದ್ದರಾಮಯ್ಯಗೆ ಬೆಂಬಲ ಕೊಡುವ ದಾರಿದ್ರ್ಯ ನಮಗೆ ಬಂದಿಲ್ಲ. ಅವರೇನೆಂದು ನಮಗೆ ಗೊತ್ತಿದೆ. ಅಲ್ಲದೆ, ನಾಲ್ಕು ವರ್ಷಗಳಲ್ಲಿ ಯಾವ ಸಾಧನೆ ಮಾಡಿದ್ದಾರೆಂದು ಅವರ ಪರವಾಗಿ ನಿಲ್ಲಬೇಕು. ಲೋಕಾಯುಕ್ತಕ್ಕೆ ಬೆಣೆ ಹೊಡೆದಿದ್ದೇ ಅವರ ಸಾಧನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಅಮಿತ್ ಷಾಭಾಷಣ ಕುರಿತು ಪ್ರತಿಕ್ರಿಯಿಸಿ, ರಾಜ್ಯೋತ್ಸವಕ್ಕಾಗಿ ಪ್ರಧಾನಿ ಏನಾದರೂ ಯೋಜನೆ ಕೊಟ್ಟಿದ್ದಾರೆಯೇ? ಎಂದರು. ಹಾಗೆಯೇ ಬ್ಯಾಂಕಿಂಗ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯುವಂತೆ ವ್ಯವಸ್ಥ್ಥೆ ಮಾಡಿಕೊಂಡು ಬಂದು ಷಾ ಮಾತನಾಡಲಿ ಎಂದು ಹೇಳಿದರು.
Comments