ಇಂದಿನಿಂದ ಬಿಜೆಪಿ ಪರಿವರ್ತನಾ ಯಾತ್ರೆ ಆರಂಭ
ಬಿಜೆಪಿಯಿಂದ ನಡೆಯುತ್ತಿರುವ ಈ ಪರಿವರ್ತನಾ ಯಾತ್ರೆ ರಾಜ್ಯ ರಾಜಕಾರಣದ ಮಟ್ಟಿಗೆ ಇದೊಂದು ಐತಿಹಾಸಿಕ ಯಾತ್ರೆಯಾಗಲಿದ್ದು, ದಾಖಲೆ ಮೆರೆಯಲಿದೆ. ಸುಮಾರು 75 ದಿನಗಳ ಕಾಲ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಹಲವು ಮುಖಂಡರು ಅಂದಾಜು 7,500 ಕಿ.ಮೀ ಗಳನ್ನು ಕ್ರಮಿಸುವ ಗುರಿ ಹೊಂದಲಾಗಿದೆ.
ಪರಿವರ್ತನಾ ಯಾತ್ರೆಗೆ ಸಂಬಂಧಿಸಿದಂತೆ ಸುಮಾರು ರೂ.90ಲಕ್ಷ ವೆಚ್ಚದಲ್ಲಿ ವಿಶೇಷ ರಥವನ್ನು ಸಿದ್ಧಪಡಿಸಲಾಗಿದ್ದು, ಯಾತ್ರೆಯ ಜೊತೆಗೆ ರಥಕ್ಕೂ ಅಮಿತ್ ಶಾ ಅವರು ಹಸಿರು ನಿಶಾನೆ ತೋರಲಿದ್ದಾರೆ. ಟಾಟಾ ಸಂಸ್ಥೆಯ ವಾಹನವನ್ನು ಕೇಸರಿ ರಥದ ರೀತಿ ನಿರ್ಮಾಣ ಮಾಡಲಾಗಿದ್ದು, ಇದರಲ್ಲಿ ಪರಿವರ್ತನಾ ಯಾತ್ರೆ ಮತ್ತು ಕನ್ನಡಿಗರ ಭರವಸೆಯ ಸರ್ಕಾರಕ್ಕೆ ನಾವು ಬದ್ಧ ಎಂಬ ಘೋಷವಾಕ್ಯವನ್ನು ಬರೆಯಲಾಗಿದೆ. ಸುಮಾರು 12 ಜನ ನಿಂತುಕೊಳ್ಳಲು ಸಾಧ್ಯವಾಗುವ ವೇದಿಕೆ ರಥದಲ್ಲಿ ನಿರ್ಮಾಣ ಮಾಡಲಾಗಿದ್ದು, ಸುಮಾರು 2,000 ಮಂದಿಗೆ ಕೇಳಲು ಸಾಧ್ಯವಾಗುವ ಸಾಮರ್ಥ್ಯವುಳ್ಳ ಮೈಕ್ ನ್ನು ಅಳವಡಿಸಲಾಗಿದೆ.
ರಥ ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಒಂದು ತಿರುಗುವ ಕುರ್ಚಿ ಮತ್ತು ಮೇಜನ್ನು ಅಳವಪಡಿಸಲಾಗಿದೆ. ಅಲ್ಲದೆ, ವಿಶ್ರಾಂತಿ ಮತ್ತು ಮಾತುಕತೆಗಾಗಿ ಪ್ರತ್ಯೇಕ ಕೊಠಡಿ ಜೊತೆಗೆ ಶೌಚಾಲಯ, ಅಡುಗೆ ಮನೆ ವ್ಯವಸ್ಥೆ ಕೂಡ ವಾಹನದಲ್ಲಿದೆ. ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಯಾತ್ರೆಯ ಉದ್ಘಾಟನಾ ಸಮಾರಂಭದ ನಂತರ ಅಲ್ಲಿಯೇ ಮಧ್ಯಾಹ್ನ ಭೋಜನ ನಡೆಯಲಿದೆ. ನಂತರ ಯಾತ್ರೆ ಆರಂಭವಾಗಲಿದ್ದು, ಮೊದಲ ದಿನ ತುಮಕೂರು ಜಿಲ್ಲೆಯ ಕುಣಿಗಲ್ ಮೂಲಕ ಸಂಚರಿಸಿ ಯಡಿಯೂರಿನಲ್ಲಿ ವಾಸ್ತವ್ಯ ಹೂಡಲಿದೆ. ಪ್ರತಿ ನಿತ್ಯ ಮೂರರಿಂದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಹಾದು ಹೋಗಲಿರುವ ಯಾತ್ರೆಗೆ ಹೆಚ್ಚು ಕಡಿಮೆ ವಾರಕ್ಕೆ ಒಂದರಂತೆ ವಿಶ್ರಾಂತಿ ನೀಡಲಾಗುತ್ತದೆ.
Comments