ಬಿಜೆಪಿ ಪರಿವರ್ತನಾ ರಥಯಾತ್ರೆಗೆ ಹೈಟೆಕ್ ಬಸ್ ರೆಡಿ...!
ಮಾಜಿ ಉಪಮೇಯರ್ ಎಸ್.ಹರೀಶ್ ನೇತೃತ್ವದಲ್ಲಿ ಈ ಬಸ್ ಸಿದ್ಧಪಡಿಸಲಾಗಿದ್ದು, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಇದು ಸಂಚರಿಸಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರು ಸೇರಿದಂತೆ ಮತ್ತಿತರ ನಾಯಕರು ಈ ಬಸ್‍ನಲ್ಲಿ ಪ್ರಯಾಣಿಸಲಿದ್ದಾರೆ.
ನ.2 ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಿಂದ ಬಿಜೆಪಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ನವಕರ್ನಾಟಕ ಪರಿವರ್ತನಾ ಯಾತ್ರೆಗೆ ಅತ್ಯಾಧುನಿಕ ಸೌಲಭ್ಯವುಳ್ಳ ಬಸ್ಸೊಂದನ್ನು ಸಿದ್ಧಪಡಿಸಲಾಗಿದೆ. ಈಶ್ವರ್ ಕಂಪೆನಿ ತಯಾರಿಕೆಯ ಈ ಬಸ್‍ಗೆ ಸುಮಾರು ಒಂದು ಕೋಟಿಯಷ್ಟು ಹಣವನ್ನು ಖರ್ಚು ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅತ್ಯಾಧುನಿಕ ಸೌಲಭ್ಯವುಳ್ಳ ಬಸ್‍ನಲ್ಲಿ ಮುಂಭಾಗ 12 ಮಂದಿ ನಿಂತುಕೊಂಡು ಭಾಷಣ ಮಾಡುವ ವ್ಯವಸ್ಥೆ ಮಾಡಲಾಗಿದೆ. ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತ್‍ಕುಮಾರ್, ಅನಂತ್‍ಕುಮಾರ್ ಹೆಗಡೆ, ನಿರ್ಮಲಾ ಸೀತಾರಾಮನ್, ರಮೇಶ್ ಜಿಗಜಿಣಗಿ ರಾಜ್ಯ ಉಸ್ತುವಾರಿ ಮುರಳೀಧರ್‍ರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಸಹ ಉಸ್ತುವಾರಿ ಪಿಯೂಷ್ ಗೋಯಲ್ ಸೇರಿದಂತೆ ಮತ್ತಿತರರು ಈ ವಾಹನದಲ್ಲೇ ಭಾಷಣ ಮಾಡಲಿದ್ದಾರೆ.
ಈಗಾಗಲೇ ರಾಜ್ಯದ ನಾನಾ ಕಡೆ ಸುಡುಬಿಸಿಲು ಆವರಿಸಿರುವುದರಿಂದ ಬಸ್‍ನಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಕಚೇರಿ, ಹತ್ತು ಜನರು ಕುಳಿತು ಸಭೆ ನಡೆಸಲು ಹಾಲ್, ಶೌಚಾಲಯ, ಕಾಫಿ,ಟೀ ತಯಾರಿಕೆ, ಆಹಾರ ಬಿಸಿ ಮಾಡಲು ಮೈಕ್ರೋಒವನ್, ಮಲಗಲು ವ್ಯವಸ್ಥೆ, ಕಂಪ್ಯೂಟರ್,ಲ್ಯಾಪ್‍ಟಾಪ್ ಬಳಕೆ ಮಾಡಿಕೊಳ್ಳಲು ಕಚೇರಿ ಸೇರಿದಂತೆ ಹಲವು ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಕಣ್ಣಪ್ಪ ಆಟೋ ಮೊಬೈಲ್‍ನಲ್ಲಿ ಬಸ್ ವಿನ್ಯಾಸಗೊಂಡಿದ್ದು, ಬಹುತೇಕ 2018ರ ವಿಧಾನಸಭೆ ಚುನಾವಣೆಗೂ ಇದೇ ಬಳಕೆಯಾಗಲಿದೆ ಎಂದು ತಿಳಿದು ಬಂದಿದೆ. ಬಸ್ ಚಾಲನೆ ಮಾಡಲು ನುರಿತ ವಾಹನ ಚಾಲಕರನ್ನು ನೇಮಕ ಮಾಡಲಾಗಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಿಂದ ಚಾಲನೆ ನೀಡಿದ ಬಳಿಕ ಕುಣಿಗಲ್ ಮೂಲಕ ರಾಜ್ಯದ 224 ಕ್ಷೇತ್ರಗಳಲ್ಲಿ ಬಸ್ ಸಂಚರಿಸಲಿದೆ. ಈಗಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕೂಡ ಚೆನ್ನೈನಲ್ಲಿ ಚುನಾವಣಾ ಪ್ರಚಾರಕ್ಕಾಗಿ ಅತ್ಯಾಧುನಿಕ ವಾಹನ ಸಿದ್ಧಪಡಿಸಿದ್ದಾರೆ. ಆದರೆ ಬಿಜೆಪಿ ನಾಯಕರು ಮಾತ್ರ ಕರ್ನಾಟಕದಲ್ಲೇ ಈ ಬಸ್ ಸಿದ್ಧಪಡಿಸಿದ್ದು, ಮೇಕ್ ಇನ್ ಕರ್ನಾಟಕಕ್ಕೆ ಒತ್ತು ನೀಡಿರುವುದು ವಿಶೇಷವಾಗಿದೆ.
Comments