ಚುನಾವಣೆಗಾಗಿ ಠೇವಣಿ ಹಣ ಅಕ್ರಮವಾಗಿ ದುರ್ಬಳಕೆಯಾಗಿದೆ :ಎಚ್ ಡಿಕೆ ಆರೋಪ

ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್) ಸಂಸ್ಥೆಯ ಒಟ್ಟು 55 ಕೋಟಿ ರೂ.ಹಣವನ್ನು ಮಂಗಳೂರಿನ ಗೋಕುಲ ನಗರದ ನವನಿಧಿ ಕಾಂಪ್ಲೆಕ್ಸ್ನಲ್ಲಿರುವ ಕುಳಾಯಿ ಮಂಗಳೂರು ಶಾಖೆ ಇಂಡಿಯನ್ ಓವರ್ ಸೀಸ್ ಬ್ಯಾಂಕ್ನಲ್ಲಿ ನಿಗದಿತ ಠೇವಣಿ ಇರಿಸಲಾಗಿತ್ತು.
ಕೆಆರ್‌ಐಡಿಎಲ್ ಇದೇ ಬ್ಯಾಂಕಿನಲ್ಲಿ ನಕಲಿ ಖಾತೆ ಸೃಷ್ಟಿಸಿದ್ದು, ಆ ಖಾತೆಯ ಮೂಲಕ ಬೇರೆ-ಬೇರೆ ಅನುತ್ಪಾದಕ ಖಾತೆಗಳಿಗೆ ವರ್ಗಾವಣೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಆ ಪೈಕಿ 50 ಲಕ್ಷ ರೂ.ಗಳನ್ನು ಬೆಂಗಳೂರಿನ ಕೋರಮಂಗಲ ಶಾಖೆಯ ಶಾ ಎಕ್ಸ್ಪೋರ್ಟ್ಸ್ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಆದರೆ, ಈ ಖಾತೆ 2 ವರ್ಷ ವ್ಯವಹಾರವನ್ನೆ ನಡೆಸಿಲ್ಲ ಎಂದು ಅಂಕಿ-ಅಂಶಗಳನ್ನು ನೀಡಿದರು. ಸರಕಾರದ ಹಣವನ್ನು ವೈಯಕ್ತಿಕ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಅದನ್ನು ವಿಧಾನಸಭಾ ಚುನಾವಣಾ ವೆಚ್ಚಕ್ಕೆ ಬಳಸಲು ಸಿದ್ದರಾಮಯ್ಯ ನೇತೃತ್ವದ ಸರಕಾರ ಮುಂದಾಗಿದೆ. ಈ ರೀತಿ ಚುನಾವಣೆ ನಡೆಸುವ ಸಿದ್ದರಾಮಯ್ಯರವರದ್ದು ಯಾವ ರೀತಿಯ ಪಾರದರ್ಶಕ ಆಡಳಿತ ಎಂದು ಪ್ರಶ್ನಿಸಿದರು. ರೈತರ ಸಾಲಮನ್ನಾ ಹಣವನ್ನು 6 ತಿಂಗಳಿಂದ ಬ್ಯಾಂಕ್ಗಳಿಗೆ ತುಂಬಲು ಇವರಿಗೆ ಸಾಧ್ಯವಾಗಿಲ್ಲ. ಚುನಾವಣಾ ವೆಚ್ಚಕ್ಕೆ ಮಾತ್ರ ಈ ರೀತಿ ಅಕ್ರಮ ವರ್ಗಾವಣೆ ಮಾಡಲಾಗುತ್ತಿದೆ. ಇದು ಒಂದು ಸಣ್ಣ ಉದಾಹರಣೆಯಷ್ಟೆ. ಈ ರೀತಿಯ ಹಲವು ಅಕ್ರಮಗಳು ಈ ಸರಕಾರದಲ್ಲಿ ನಡೆದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆ ಹಣ ಎಲ್ಲಿ: ಈ ಅಕ್ರಮದ ಬಗ್ಗೆ ಸಚಿವ ಎಚ್.ಕೆ.ಪಾಟೀಲ್ ಅವರಿಗೆ ಮಾಹಿತಿ ಇದೆಯೋ ಇಲ್ಲವೋ ಗೊತ್ತಿಲ್ಲ. ಈ ಹಿಂದೆ ಬಿಜೆಪಿ ಸರಕಾರ ಇದ್ದಾಗ ಈ ರೀತಿಯ ಅಕ್ರಮ ಹಣ ವರ್ಗಾವಣೆ ಬಗ್ಗೆ ತಾನು ಪ್ರಸ್ತಾಪಿಸಿದ್ದೆ. ಆ ವೇಳೆ ಸಚಿವರು ತನಗೆ ಮಾಹಿತಿ ಕೊರತೆ ಎಂದು ಅಲ್ಲಗಳೆದಿದ್ದರು ಎಂದು ಟೀಕಿಸಿದರು. ಮಂಡ್ಯ ನಗರಸಭೆಯಲ್ಲಿ 5ಕೋಟಿ ರೂ., ರಾಮನಗರ ಪ್ರಾಧಿಕಾರದಲ್ಲಿ 15ಕೋಟಿ ರೂ.ಹಣವನ್ನೂ ಇದೇ ರೀತಿ ಅಕ್ರಮವಾಗಿ ವರ್ಗಾಯಿಸಲಾಗಿತ್ತು. ಆ ಹಣ ಎಲ್ಲಿಗೆ ಹೋಯಿತು. ಈ ಬಗ್ಗೆ ಪತ್ತೆಹಚ್ಚುವ ಕೆಲಸ ಇದುವರೆಗೂ ಆಗಿಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಕೆಆರ್‌ಐಟಿಎಲ್ನಿಂದ ನಕಲಿ ಖಾತೆ ಸೃಷ್ಟಿಸಿ ಹಣ ದುರುಪಯೋಗ ಸಂಬಂಧ ಅ.27ರಂದು ನನ್ನ ಗಮನಕ್ಕೆ ಬಂದಿದ್ದು, ಅ.28ರೊಳಗೆ ವರದಿ ಸಲ್ಲಿಸಲು ಇಲಾಖೆ ಕಾರ್ಯದರ್ಶಿಗೆ ಸೂಚನೆ ನೀಡಲಾಗಿತ್ತು. ಕೆಆರ್‌ಐಡಿಎಲ್ ಸಂಸ್ಥೆ ವೀರನಗೌಡ ಪಾಟೀಲ್ ಮತ್ತು ಪ್ರಶಾಂತ್ ಮಾಡಾಳ ಭಾಗಿಯಾಗಿದ್ದಾರೆ. ಅಲ್ಲದೆ, ಮಂಗಳೂರಿನ ಇಂಡಿಯನ್ ಓವರ್ಸೀಸ್ ಬ್ಯಾಂಕಿನ ಮ್ಯಾನೇಜರ್ ಕೂಡ ಪಾಲ್ಗೊಂಡಿರುವ ಸಂಶಯವಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
Comments