ಕೋಳಿ ಕೂಡ ತಿಂದು ಧರ್ಮಸ್ಥಳಕ್ಕೆ ಹೋಗಿದ್ದೆ: ಸಿಎಂ ವಿವಾದಾತ್ಮಕ ಹೇಳಿಕೆ

ದೇವರ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲದವರು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ನಾನು ಅಂದು ಮೀನು ಮಾತ್ರವಲ್ಲ ಕೋಳಿ ಸಹ ತಿಂದಿದ್ದೆ. ಈ ವೇಳೆ ವೀರೇಂದ್ರ ಹೆಗ್ಗಡೆ ಅವರ ಒತ್ತಾಯಕ್ಕೆ ಮಣಿದು ದೇವಸ್ಥಾನಕ್ಕೆ ಹೋಗಿದ್ದು ನಿಜ, ಆದರೆ ತಡವಾಗುತ್ತದೆ ಎಂಬ ಕಾರಣಕ್ಕೆ ಗರ್ಭಗುಡಿ ಬಳಿ ಹೋಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ನಾನು ಮೀನು ಮಾತ್ರವಲ್ಲ ಕೋಳಿ ಕೂಡ ತಿಂದು ಧರ್ಮಸ್ಥಳದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಮೀನಿನ ಖಾದ್ಯ ತಿಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಮೀನಿನ ಜೊತೆ ಕೋಳಿಯೂ ತಿಂದಿರುವುದಾಗಿ ಹೇಳುವ ಮೂಲಕ ಆಸ್ತಿಕರಿಗೆ ತಿರುಗೇಟು ನೀಡಿದ್ದಾರೆ. ಆಹಾರ ಅವರವರ ಸಂಪ್ರದಾಯ, ಪದ್ಧತಿ ಹಾಗೂ ವಿವೇಚನೆಗೆ ಬಿಟ್ಟ ವಿಷಯ. ಒಂದು ವೇಳೆ ಗರ್ಭಗುಡಿಗೆ ಹೋಗಿದ್ದರು ಸಹ ದೇವರು ಯಾವ ರೀತಿ ಅಪವಿತ್ರ ಆಗ್ತಿದ್ದ ನೀವೇ ಹೇಳಿ. ನೀವೆಲ್ಲ ಬೇಡರ ಕಣ್ಣಪ್ಪನ ಕಥೆ ಕೇಳಿಲ್ಲವ.. ಜಿಂಕೆ ಮಾಂಸ ತಿಂದವರಿಗೆ ಶಿವ ಒಲಿದಿದ್ದ ಎಂದು ಬೇಡರ ಕಣ್ಣಪ್ಪನ ಕಥೆ ಹೇಳಿದರು. ಉಳ್ಳವರು ಶಿವಾಲಯವ ಮಾಡುವರು, ನಾನೇನು ಮಾಡಲಿ ಬಡವನಯ್ಯ' ಎಂಬ ಬಸವಣ್ಣನವರ ವಚನದ ಮೂಲಕ ಬಿಜೆಪಿಗೆ ಟಾಂಗ್ ನೀಡಿದರು. ಅಲ್ಲದೆ ಮಾನವ ಶರೀರವೇ ದೇಗುಲ ಎಂದು ಬಸವಣ್ಣ ಹೇಳಿದ್ದರು. ಹಾಗಿದ್ದರೆ ಮಾಂಸ ತಿನ್ನುವವರು ಏನು ಮಾಡಬೇಕು. ಮಾಂಸ ಸೇವಿಸಿದ 48 ಗಂಟೆಗಳ ಕಾಲ ದೇಹದಲ್ಲಿ ಮಾಂಸ ಇರುತ್ತದೆ. ಇವರೆಲ್ಲ ಏನು ಮಾಡಬೇಕು ಎಂದು ಸಿಎಂ ಪ್ರಶ್ನಿಸಿದರು.
Comments