ಮಂಜುನಾಥ ಸ್ವಾಮಿಯ ಪೂಜೆ ಸಲ್ಲಿಸುವವರೆಗೂ ಉಪವಾಸದಲ್ಲಿದ್ದ ಮೋದಿ

ಸ್ವಾಮಿಯ ದರ್ಶನಕ್ಕಾಗಿ ಪ್ರಧಾನಿ ಮೋದಿ ಅವರು ಬೆಳಗ್ಗೆಯಿಂದ ಉಪವಾಸವಿದ್ದು, ದೇವರ ದರ್ಶನ ಹಾಗೂ ಪೂಜೆ ಆದ ಬಳಿಕ ಪ್ರಸಾದ ಸ್ವೀಕಾರ ಮಾಡಿ ನಂತರ ಉಪಾಹಾರ ಸೇವಿಸಿದ್ದಾರೆ. ದರ್ಶನ ಪೂಜೆಯ ನಂತರ ಬೆಳಗ್ಗಿನ ಉಪಾಹಾರವನ್ನು ಧರ್ಮಸ್ಥಳ ಕ್ಷೇತ್ರದ ಸುತ್ತುಪೌಳಿಯ ಹೊರಭಾಗದಲ್ಲಿರುವ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಡಾ. ಹೆಗ್ಗಡೆ ದಂಪತಿ,ಮಕ್ಕಳು, ಸಹೋದರರು ಪ್ರಧಾನಿಗಳಿಗೆ ಉಪಹಾರ ನೀಡಿ ಉಪಚರಿಸಿದರು. ದೇವಸ್ಥಾನಕ್ಕೆ ಪ್ರವೇಶವಾದ ಕೂಡಲೇ ಪ್ರಧಾನಿ ಮೋದಿಗೆ ಪಂಚೆ ಮತ್ತು ಶಲ್ಯವನ್ನು ತೊಡಿಸಿ ವಿಶೇಷ ಪೂಜೆಗೆ ಕರೆದೊಯ್ಯಲಾಯಿತು. ಮಂಜುನಾಥಸ್ವಾಮಿಗೆ ವಿಶೇಷ ಪೂಜೆ ಮತ್ತು ರುದ್ರಾಭಿಷೇಕ ಮಾಡಲಾಯಿತು. ದೇವರ ವಿರುದ್ಧ ದಿಕ್ಕಿನಲ್ಲಿರುವ ಅಣ್ಣಪ್ಪಸ್ವಾಮಿ,ಹಿಂಭಾಗದಲ್ಲಿರುವ ಮಹಾಗಣಪತಿ ದೇವಸ್ಥಾನಕ್ಕೆ ತೆರಳಿ ಅಲ್ಲೂ ಮೋದಿ ವಿಶೇಷ ಪೂಜೆ ಸಲ್ಲಿಸಿದರು. ಗುಡಿಯ ನಂತರ ದೇವಳದ ಪ್ರಾಂಗಣದಲ್ಲಿರುವ ಅಮ್ಮನವರ ಗುಡಿಗೆ ತೆರಳಿ ಅಲ್ಲಿ ಮಹಾಪೂಜೆ ಸಲ್ಲಿಸಿದರು. ದೇವಾಲಯದಲ್ಲಿ ಸುಮಾರು ೧೦ ನಿಮಿಷ ಮೋದಿ ಧ್ಯಾನ ಮಾಡಿದ ನಂತರ ಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಜೊತೆ ಸಮಾಲೋಚನೆ ನಡೆಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಸಿಟಿ ರವಿ ಬಂದು ಪೂಜೆ ಸಲ್ಲಿಕೆ ಮಾಡಿದ್ದು, ಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಕುಟುಂಬದ ಆಪ್ತ ೧೫ ಮಂದಿಯನ್ನು ದೇವಸ್ಥಾನದ ಒಳಗೆ ಬಿಡಲಾಗಿತ್ತು.
Comments