ಮಾಜಿ ಪ್ರಧಾನಿ ದೇವೇಗೌಡರನ್ನು ಹೊಗಳಿದ ರಾಷ್ಟ್ರಪತಿ ಕೋವಿಂದ್

ತಮ್ಮ ಲಿಖಿತ ಭಾಷಣದಲ್ಲಿ ದೇವೇಗೌಡರ ಹೆಸರು ಇಲ್ಲದಿದ್ದರೂ ರಾಷ್ಟ್ರಪತಿ ಕೋವಿಂದ್ ಅವರು ಗೌಡರ ಹೆಸರನ್ನು ಜ್ಞಾಪಿಸಿಕೊಂಡು ಜಂಟಿ ಅಧಿವೇಶನದಲ್ಲಿ ಹೇಳಿ, ಅವರು ಮುಖ್ಯಮಂತ್ರಿಗಳಷ್ಟೇ ಅಲ್ಲ. ಈ ದೇಶದ ಪ್ರಧಾನಮಂತ್ರಿಗಳು ಕೂಡ ಆಗಿದ್ದರು. ನನ್ನ ಉತ್ತಮ ಸ್ನೇಹಿತರು ಎಂದು ಹೇಳಿದಾಗ, ಜೆಡಿಎಸ್‍ನ ಹಿರಿಯ ಸದಸ್ಯ ವೈ.ಎಸ್.ವಿ.ದತ್ತ ಎದ್ದು ರಾಷ್ಟ್ರಪತಿಗಳಿಗೆ ಕೈ ಮುಗಿದರು.
ವಿಧಾನಸೌಧದ ವಜ್ರಮಹೋತ್ಸವದ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ಮಾಡಿದ ಭಾಷಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೆಸರನ್ನು ಉಲ್ಲೇಖಿಸಿ ಅವರ ಸೇವೆಯನ್ನು ಕೊಂಡಾಡಿದರು.ಭಾಷಣ ಪ್ರಾರಂಭಿಸಿದಾಗ ವಿಧಾನಸೌಧ ನಿರ್ಮಾಣ ಕಾಲಘಟ್ಟದ ಮುಖ್ಯಮಂತ್ರಿಗಳಾದ ಕೆ.ಸಿ.ರೆಡ್ಡಿ , ಕೆಂಗಲ್ ಹನುಮಂತಯ್ಯ, ಕಡಿದಾಳು ಮಂಜಪ್ಪ ಅವರನ್ನು ಸ್ಮರಿಸಿಕೊಂಡರು. ನಂತರ ನಿಜಲಿಂಗಪ್ಪ , ದೇವರಾಜ ಅರಸ್, ಬಿ.ಡಿ.ಜತ್ತಿ, ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ವೀರೇಂದ್ರ ಪಾಟೀಲ್, ಎಸ್.ಎಂ.ಕೃಷ್ಣ ಅವರ ಹೆಸರುಗಳನ್ನು ಉಲ್ಲೇಖಿಸಿದರು.
ಬಳಿಕ ಅವರೇ ದೇವೇಗೌಡರ ಹೆಸರನ್ನು ಸ್ಮರಿಸಿಕೊಂಡು ದೇವೇಗೌಡರು ಮುಖ್ಯಮಂತ್ರಿಯಾಗಿದ್ದವರು, ದೇಶದ ಪ್ರಧಾನಮಂತ್ರಿ ಕೂಡ ಆಗಿದ್ದವರು ಎಂದರು. ಆಗ ಕಾಂಗ್ರೆಸ್ ಶಾಸಕ ಬಸವರಾಜ್ ರಾಯರೆಡ್ಡಿ ಅವರು ಸದನದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಹಾಜರಿದ್ದಾರೆ ಎಂದು ಹೇಳಿದಾಗ ಸಾಕಷ್ಟು ಜನ ಸೇವೆ ಸಲ್ಲಿಸಿದ್ದಾರೆ. ಇಲ್ಲಿ ಕೆಲವೇ ಹೆಸರುಗಳನ್ನು ಉಲ್ಲೇಖಿಸಿದ್ದೇನೆ ಎಂದು ತಿಳಿಸಿ ತಮ್ಮ ಭಾಷಣವನ್ನು ಮುಂದುವರೆಸಿದರು.
Comments