60 ಗ್ರಾಮಗಳಲ್ಲಿ ವಾಸ್ತವ್ಯ ಯೋಜನೆ ಹಾಕಿಕೊಂಡಿರುವ ಎಚ್ ಡಿ ಕೆ
ಮುಂಬೈ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಕನಿಷ್ಠ 60 ಗ್ರಾಮಗಳಲ್ಲಿ ವಾಸ್ತವ್ಯ ಮಾಡಬೇಕೆಂದು ಕುಮಾರಸ್ವಾಮಿಯವರು ಯೋಜನೆ ಹಾಕಿಕೊಂಡಿದ್ದಾರೆ. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರು ನಡೆಸುತ್ತಿದ್ದ ಗ್ರಾಮ ವಾಸ್ತವ್ಯದಿಂದಾಗಿಯೇ ಹೆಚ್ಚು ಪ್ರಸಿದ್ಧಿ ಗಳಿಸಿದ್ದಾರೆ.
ಹೆಚ್ಚು ಜನರನ್ನು ತಲುಪಿಸಿದ್ದರು. ಅದನ್ನೇ ಚುನಾವಣೆಯ ಸಂದರ್ಭದಲ್ಲಿ ಬಳಸಿಕೊಳ್ಳಲು ಹೆಚ್‌ಡಿಕೆ ಉದ್ದೇಶಿಸಿದ್ದಾರೆ ಎನ್ನಲಾಗ್ತಿದೆ.ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್‌ಗೆ ಹೆಚ್ಚಿನ ಬಲವೇನು ಇಲ್ಲ. ಅಲ್ಲಿಯೇ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು. ಅದಕ್ಕೆ ಗ್ರಾಮ ವಾಸ್ತವ್ಯ ನೆರವಾಗಲಿದೆ ಎಂಬುದು ಕುಮಾರಸ್ವಾಮಿಯವರ ಲೆಕ್ಕಾಚಾರ. ಅವರು ನ. 1ರಿಂದ ಯಾತ್ರೆ ಆರಂಭಿಸಲಿದ್ದು, ಎಲ್ಲ ವಿಧಾನಸಭಾ ಕ್ಷೇತ್ರಗಳನ್ನು ತಲುಪುವುದು ಅವರ ಉದ್ದೇಶವಾಗಿದೆ. ಅದೇ ಸಂದರ್ಭದಲ್ಲಿಯೇ ಪ್ರತಿ ಜಿಲ್ಲೆಯಲ್ಲಿಯೂ 2 ರಿಂದ 3 ಗ್ರಾಮ ವಾಸ್ತವ್ಯ ಮಾಡಬೇಕೆಂದು ಯೋಜನೆ ರೂಪಿಸಲಾಗುತ್ತಿದೆ. ಯಾವ ಗ್ರಾಮದಲ್ಲಿ ತಂಗಬಹುದು, ಅದಕ್ಕೆ ಬೇಕಾಗುವ ವ್ಯವಸ್ಥೆಗಳೇನು ಎಂಬುದನ್ನು ಸಿದ್ಧಪಡಿಸುವಂತೆ ಜಿಲ್ಲಾ ಮುಖಂಡರಿಗೆ ತಿಳಿಸಲಾಗಿದೆ.
ಇನ್ನೂ ಯಾವುದೇ ಜಿಲ್ಲೆಯಿಂದ ಮಾಹಿತಿ ಬಂದಿಲ್ಲ ಎಂದು ಹೇಳಲಾಗುತ್ತಿದೆ.ಎರಡನೇ ಹಂತದಲ್ಲಿ ಹಳೇ ಮೈಸೂರು ಭಾಗದಲ್ಲಿ ಕೆಲವೆಡೆ ಗ್ರಾಮ ವಾಸ್ತವ್ಯ ಮಾಡುವ ಬಗ್ಗೆಯೂ ಪಕ್ಷದ ಮುಖಂಡರ ಜತೆ ಚರ್ಚೆ ನಡೆಸಲಾಗಿದೆ. ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನ ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಅಧ್ಯಯನ ನಡೆಸುವುದು, ಅವುಗಳ ಪರಿಹಾರಕ್ಕೆ ಪ್ರಣಾಳಿಕೆಯಲ್ಲಿ ಪರಿಹಾರ ಘೋಷಿಸುವುದು ಅವರ ಚಿಂತನೆಯಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಇದೀಗ ಚೇತರಿಸಿಕೊಳ್ಳುತ್ತಿರುವ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಕುರಿತಂತೆ ವೈದ್ಯರ ಬಳಿ ಸಲಹೆ ಸಹ ಕೇಳಿದ್ದಾರೆ ಎನ್ನಲಾಗಿದೆ. ಹಳ್ಳಿಗಳಿಗಿಂತ ಪಟ್ಟಣ ಪ್ರದೇಶದಲ್ಲಿ ಸಂಚರಿಸಿ, ಅಲ್ಲಿಯೇ ವಾಸ್ತವ್ಯ ಮಾಡುವುದು, ಧೂಳಿನಿಂದ ಸೋಂಕು ತಗುಲದಂತೆ ಎಚ್ಚರಿಕೆ ವಹಿಸಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಆದರೆ ಇನ್ನೂ ಒಂದು ವಾರದ ನಂತರ ವೈದ್ಯರಿಂದ ಮತ್ತೊಮ್ಮೆ ಸಲಹೆ ಪಡೆದು ಗ್ರಾಮ ವಾಸ್ತವ್ಯದ ಬಗ್ಗೆ ಅಂತಿಮ ನಿರ್ಧಾರಕ್ಕೆ ಕುಮಾರಸ್ವಾಮಿಯವರು ಬರಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.
Comments