ಬಿಜೆಪಿ ಸೇರಲು 1 ಕೋಟಿ ರು.ಗಳ ಆಮಿಷ ಒಡ್ಡಲಾಗಿತ್ತು: ಪಟೇಲ್ ಆರೋಪ
ಪ್ರಸ್ತುತ ಗುಜರಾತ್ ನಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದು, ಗುಜರಾತ್ ನಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಪಟೇಲ್ ಸಮುದಾಯದ ಪ್ರತಿಭಟನೆ ಗುಜರಾತ್ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿತ್ತು. ಕೇವಲ ಗುಜರಾತ್ ಸರ್ಕಾರಕ್ಕೆ ಮಾತ್ರವಲ್ಲದೇ ಕೇಂದ್ರದ ಎನ್ ಡಿಎ ಸರ್ಕಾರಕ್ಕೂ ಈ ಪ್ರತಿಭಟನೆ ಮುಜುಗರವನ್ನುಂಟು ಮಾಡಿತ್ತು.
ಇದೀಗ ಮತ್ತೆ ಗುಜರಾತ್ ಬಿಜೆಪಿ ಘಟಕಕ್ಕೆ ಮುಜುಗರವಾಗುವಂತಹ ಆರೋಪವನ್ನು ಪಟೇಲ್ ಸಮುದಾಯ ಮಾಡುತ್ತಿದ್ದು, ಪಟೇಲ್ ಸಮುದಾಯದ ಹೋರಾಟಗಾರರಿಗೆ ಬಿಜೆಪಿ ಸೇರುವಂತೆ 1 ಕೋಟಿ ರೂ.ಗಳ ಆಮಿಷ ಒಡ್ಡಲಾಗಿತ್ತು ಎಂದು ಆರೋಪಿಸಲಾಗಿದೆ. ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿಯ ವಕ್ತಾರ ನರೇಂದ್ರ ಪಟೇಲ್ ಅವರು ಗಂಭೀರ ಆರೋಪ ಮಾಡುತ್ತಿದ್ದು, ತಮ್ಮನ್ನು ತಮ್ಮ ಬೆಂಬಲಿಗರು ಬಿಜೆಪಿ ಪಕ್ಷ ಸೇರುವಂತೆ ವರುಣ್ ಪಟೇಲ್ ಆಮಿಷ ಒಡ್ಡಿದ್ದರು. ಈ ಕಾರ್ಯ ಮಾಡಿದರೆ ತಮಗೆ ಒಂದು ಕೋಟಿ ನೀಡುವುದಾಗಿ ಅವರು ಹೇಳಿದ್ದರು. ಗಾಂಧಿನಗರ ಮತ್ತು ಶ್ರೀಕಮಲಂ ನಲ್ಲಿರುವ ಬಿಜೆಪಿ ಕಚೇರಿಗೆ ಕರೆದುಕೊಂಡು ಹೋಗಿದ್ದ ವರುಣ್ ಪಟೇಲ್, ಜೀತು ಭಾಯ್ ವಘಾನಿ ಮತ್ತು ಇತರೆ ಬಿಜೆಪಿ ಸಚಿವರನ್ನು ಭೇಟಿ ಮಾಡಿಸಿದ್ದರು.
ಬಳಿಕ ಸುಮಾರು 10 ಲಕ್ಷ ರೂ.ಗಳ ಹಣ ಇರುವ ಬ್ಯಾಗ್ ನೀಡಿ ಇದು ಅಡ್ವಾನ್ಸ್ ಮಾತ್ರ..ನಾಳೆ ನೀವು ಬಿಜೆಪಿ ಪಕ್ಷ ಸೇರಿದ ಬಳಿಕ ಬಾಕಿ 90 ಲಕ್ಷ ನೀಡುವುದಾಗಿ ಹೇಳಿದರು. ನಾಳೆ ಬಿಜೆಪಿ ಕಚೇರಿಯಲ್ಲಿ ಸಭೆ ಬಳಿಕ ನಿಮಗೆ ಉಳಿದ ಹಣ ನೀಡುವುದಾಗಿ ವರುಣ್ ಪಟೇಲ್ ಹೇಳಿದ್ದರು. ಆದರೆ ಇದು ನನಗೆ ತಪ್ಪು ಎಂದೆನಿಸಿತು. ನನ್ನ ಸಮುದಾಯಕ್ಕೆ ದ್ರೋಹ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದು ನರೇಂದ್ರ ಪಟೇಲ್ ಆರೋಪಿಸಿದ್ದಾರೆ. ನರೇಂದ್ರ ಪಾಟೀಲ್ ಅವರ ಈ ಹೇಳಿಕೆ ಇದೀಗ ಗುಜರಾತ್ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಇತ್ತೀಚೆಗಷ್ಟೇ ಪಟೇಲ್ ಸಮುದಾಯದ ಹೋರಾಟದ ಮುಂಚೂಣಿಯಲ್ಲಿದ್ದ ಮತ್ತು ಹಾರ್ದಿಕ್ ಪಟೇಲ್ ಆಪ್ತರಾದ ರೇಷ್ಮಾ ಪಟೇಲ್ ಮತ್ತು ವರುಣ್ ಪಟೇಲ್ ಬಿಜೆಪಿಗೆ ಸೇರ್ಪಡೆಯಾಗಿದ್ದರು.
Comments