ಸಿದ್ದರಾಮಯ್ಯ ಮೊದಲು ನಾಸ್ತಿಕರಾಗಿದ್ದರು, ಈಗ ಆಸ್ತಿಕರಾಗಿದ್ದಾರೆ : ದೇವೇಗೌಡ
ಕಾರವಾರ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲು ನಾಸ್ತಿಕರಾಗಿದ್ದರು. ಆದರೆ, ಅಧಿಕಾರಕ್ಕೆ ಬಂದ ಬಳಿಕ ಅವರು ಆಸ್ತಿಕರಾಗಿದ್ದಾರೆ' ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಭಾನುವಾರ ಶಿರಸಿಯಲ್ಲಿ ಮಾತನಾಡಿದ ದೇವೇಗೌಡರು, 'ಮೊದ ಮೊದಲು ನಾಸ್ತಿಕರೆಂದು ಹೇಳಿಕೊಂಡು ಓಡಾಡುತ್ತಿದ್ದ ಸಿದ್ದರಾಮಯ್ಯ ಅವರು ಇತ್ತೀಚೆಗೆ ಆಸ್ತಿಕರಾಗುತ್ತಿದ್ದಾರೆ. ಶನಿವಾರ ಕೋಲಾರದ ಮುಳಬಾಗಿಲಿನಲ್ಲಿ ವಿಘ್ನೇಶ್ವರ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಿ, ಕಾರ್ಯಕ್ರಮ ನಡೆಸಿ ನಾವೇ ಮುಂದೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ' ಎಂದರು.
ನಮ್ಮ ಪಕ್ಷಕ್ಕೆ ಮೊದಲು ಅಪ್ಪ-ಮಕ್ಕಳ ಪಕ್ಷ ಎಂಬ ಆರೋಪವಿತ್ತು. ಆದರೆ, ಪರಿಶಿಷ್ಟ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ನಾಯಕರು ನಮ್ಮ ಪಕ್ಷದಲ್ಲಿದ್ದಾರೆ. ನಮ್ಮದು ಸಾಮೂಹಿಕ ನಾಯಕತ್ವದ ಪಕ್ಷವಾಗಿದೆ. ಪ್ರಾದೇಶಿಕ ಪಕ್ಷದಿಂದ ನೆರೆಯ ರಾಜ್ಯಗಳಲ್ಲಿ ಆದಂತಹ ಅಭಿವೃದ್ಧಿ ನಮ್ಮ ರಾಜ್ಯದಲ್ಲೂ ಆಗಬೇಕು' ಎಂದು ತಿಳಿಸಿದರು.
ಕರ್ನಾಟಕದಲ್ಲಿಯೂ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕಿದೆ. ರಾಜ್ಯದ ಹಿತದೃಷ್ಟಿಯಿಂದ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರುವುದು ಅವಶ್ಯವಾಗಿದೆ. ಈ ಹಿನ್ನಲೆಯಲ್ಲಿ ಪಕ್ಷ ಸಂಘಟಿಸುವುದು ಅಗತ್ಯವಾಗಿದೆ. ಉತ್ತರ ಕನ್ನಡ, ಉಡುಪಿ, ಮಂಗಳೂರು ಜಿಲ್ಲೆಯಲ್ಲಿ ಇನ್ನು ಮುಂದೆ ಪಕ್ಷ ಸಂಘಟನೆಗೆ ಸಂಚರಿಸುತ್ತೇನೆ' ಎಂದು ಹೇಳಿದರು.
ಈ ಭಾಗದಲ್ಲಿ ಮಧು ಬಂಗಾರಪ್ಪ ಹೆಚ್ಚು ಸಂಚಾರ ಮಾಡುತ್ತಿದ್ದಾರೆ. ಮಾಜಿ ಮುಖ್ಯಂತ್ರಿ ಬಂಗಾರಪ್ಪರ ಪ್ರಭಾವ ಈ ಭಾಗದಲ್ಲಿ ಹೆಚ್ಚಿರುವುದರಿಂದ ಮಧು ಬಂಗಾರಪ್ಪ ಈ ಕಡೆ ಹೆಚ್ಚು ಓಡಾಡಿ ಮಾರ್ಗದರ್ಶನ ನೀಡುತ್ತಿದ್ದಾರೆ. ನವೆಂಬರ 1 ರಿಂದ ಕುಮಾರಸ್ವಾಮಿ ಕೂಡ ರಾಜ್ಯ ಪ್ರವಾಸ ಮಾಡಲಿದ್ದಾರೆ. ನಾನು ಕೂಡಾ ಪ್ರತಿ ಕ್ಷೇತ್ರಕ್ಕೆ ಭೇಟಿ ನೀಡಿ ಸಂಘಟನೆ ಮಾಡುತ್ತೇನೆ' ಎಂದರು.
ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಆರ್.ನಾಯ್ಕ, ಸೊರಬಾ ಶಾಸಕ ಮಧು ಬಂಗಾರಪ್ಪ, ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ನಾಯ್ಕ, ಜೆಡಿಎಸ್ ಮುಖಂಡರಾದ ಶಶಿಭೂಷಣ ಹೆಗಡೆ, ಎ.ರವೀಂದ್ರ ನಾಯ್ಕ, ರಾಜೇಶ್ವರಿ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.
Comments