ಎಚ್.ವಿಶ್ವನಾಥ್ ವಿರುದ್ದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಪಕ್ಷದಲ್ಲಿ ಕಿಮ್ಮತ್ತೇ ಇರದವರು ನನ್ನನ್ನು ಹೇಗೆ ಪಕ್ಷಕ್ಕೆ ಸೇರಿಸಲು ಸಾಧ್ಯವಾಯಿತು? ಎಂದು ಅವರು ಮಾಜಿ ಸಂಸದ ಎಚ್.ವಿಶ್ವನಾಥ್ ವಿರುದ್ದ ವಾಗ್ದಾಳಿ ನಡೆಸಿದರು. ಪಟ್ಟಣದ ಪುರಸಭೆ ಬಯಲು ರಂಗಮಂದಿರದ ಆವರಣದಲ್ಲಿ ಆಯೋಜಿಸಿದ್ದ ಬೂತ್ ಮಟ್ಟದ ಪದಾಧಿಕಾರಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು
ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯನವರನ್ನು ಕರೆತರಲು ನಾನೇ ಕಾರಣ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿರುವವರಿಗೆ ಪಕ್ಷದಲ್ಲಿ ಕಿಮ್ಮತ್ತು ಇರಲಿಲ್ವಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಪಕ್ಷದಲ್ಲಿ ಎಲ್ಲ ಅಧಿಕಾರವನ್ನು ಅನುಭವಿಸಿ ಈಗ ಪಕ್ಷ ತೊರೆದು ನನಗೆ ಕಾಂಗ್ರೆಸ್‍ನಿಂದ ಅನ್ಯಾಯವಾಯಿತು ಎಂದು ಬೊಬ್ಬೆ ಹೊಡೆಯುವ ಈ ಆಸಾಮಿಗೆ 2008ರಲ್ಲಿ ಮಂಚನಹಳ್ಳಿ ಮಹದೇವ್ ಅವರಿಗೆ ಟಿಕೆಟ್ ನೀಡದೆ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಯಿತು. ಆಗ ಸೋತ ನಂತರ ಮತ್ತೆ 2009ರ ಲೋಕಸಭಾ ಚುನಾವಣೆಯಲ್ಲಿ ಸಂಸತ್ತಿಗೆ ಸ್ಪರ್ಧಿಸಲು ನಾನು ಬಿ ಫಾರಂ ಕೊಡಿಸಿದೆ. ಹಾಗಾಗಿ ಕಾಂಗ್ರೆಸ್‍ನಿಂದ ನಿಜವಾಗಿಯೂ ಅನ್ಯಾಯವಾಗಿದ್ದು ಮಂಚನಹಳ್ಳಿ ಮಹದೇವ್‍ಗೆ ಹೊರತು ವಿಶ್ವನಾಥ್‍ಗಲ್ಲ ಎಂದು ಹೇಳಿದರು. ಅಭ್ಯರ್ಥಿ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಎರಡು ಬಾರಿ ಜಿ.ಪಂ.ಸದಸ್ಯರಾಗಿ ತಾಲೂಕಿನಲ್ಲಿ ಅತಿ ಹೆಚ್ಚು ಜನಾನುರಾಗಿ ಮತ್ತು ಜನಪ್ರಿಯತೆ ಪಡೆದಿರುವ ಜಿ.ಪಂ. ವಿಪಕ್ಷ ನಾಯಕ ಡಿ.ರವಿಶಂಕರ್ ಅವರೇ 2018ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದರು. ಮಾಜಿ ಶಾಸಕ ದಿ.ಮಂಚನಹಳ್ಳಿ ಮಹದೇವ್ ಪುತ್ರಿ ಐಶ್ವರ್ಯ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಪಕ್ಷವನ್ನು ಸಂಘಟಿಸಿ ಡಿ.ರವಿಶಂಕರ್ ಗೆಲುವಿಗೆ ಅವರು ದುಡಿಯಲಿ. ಅವರನ್ನು ಭವಿಷ್ಯದಲ್ಲಿ ಬೆಳೆಸೋಣ ಎಂದ ಸಿದ್ದರಾಮಯ್ಯನವರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಮುಖಂಡರು ಮತ್ತು ಕಾರ್ಯಕರ್ತರು ಪ್ರಾಮಾಣಿಕವಾಗಿ ದುಡಿಯಬೇಕೆಂದು ತಿಳಿಸಿದರು.
Comments