ಪ್ರಜ್ವಲ್'ಗೆ ಟಿಕೆಟ್ ಇನ್ನೂ ಕನ್ಫರ್ಮ್ ಆಗಿಲ್ಲ: ದೇವೇಗೌಡ

ಪ್ರಜ್ವಲ್ ಈಗಾಗಲೇ ರಾಜಕೀಯದಲ್ಲಿ ಇದ್ದಾರೆ. ಬೆಂಗಳೂರು ನಗರದಲ್ಲಿ ನಡೆದ ಪೂರ್ವ ನಿಯೋಜಿತವಲ್ಲದ ಸಭೆಗೆ ಬಿಬಿಎಂಪಿಯ ಸದಸ್ಯರು ಕರೆದುಕೊಂಡು ಹೋಗಿದ್ದರು. ಅಲ್ಲಿ ಬಕೆಟ್ ಸಂಸ್ಕೃತಿ ಮತ್ತಿತರ ವಿಷಯಗಳ ಬಗ್ಗೆ ಪ್ರಜ್ವಲ್ ಹೇಳಿದ್ದಾರೆ ಎಂಬ ಕಾರಣದ ಹಿನ್ನೆಲೆಯಲ್ಲಿ ಭಾಷಣ ವಿಡಿಯೋವನ್ನು ಮಾಜಿ ಸಿಎಂ ಕುಮಾರಸ್ವಾಮಿ ತರಿಸಿ ನೋಡಿದರು.
ತಮ್ಮ ಕುಟುಂಬದಿಂದ ಕೇವಲ ಇಬ್ಬರಷ್ಟೇ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂದು ಈವರೆಗೂ ಹೇಳುತ್ತಾ ಬಂದಿದ್ದ ಮಾಜಿ ಪ್ರಧಾನಿ ದೇವೇಗೌಡ ಅವರು, ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣನವರಿಗೆ ಟಿಕೆಟ್ ನೀಡುವ ಬಗ್ಗೆ ತೀರ್ಮಾನವಾಗಿಲ್ಲ ಎಂದು ಹೇಳಿದ್ದಾರೆ. ಹಾಸನ ನಗರದಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ ಕ್ಷೇತದಲ್ಲೂ ನಾಲ್ಕೈದು ಮಂದಿ ಆಕಾಂಕ್ಷಿಗಳಿದ್ದು ಅಂತಿಮವಾಗಿ ಸ್ಥಳೀಯ ಜನರ ಅಭಿಪ್ರಾಯಕ್ಕನುಗುಣವಾಗಿ ನಾನೇ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು. ನಂತರ ಮಾಧ್ಯಮಗಳಲ್ಲಿ ಬಂದಂತೆ ಅಲ್ಲಿ ಮಾತನಾಡಿಲ್ಲ ಎಂದರು. ಆತ ಲೋಕಸಭೆಯಲ್ಲಿ ಮಾತನಾಡುವಷ್ಟು ಸಮರ್ಥನಿದ್ದಾನೆ. ಆದರೆ ಅನುಭವ ಮತ್ತು ವಯಸ್ಸು ಅಗತ್ಯವಿದೆ. ಹಿಂದೆ ಆತ ಬೇಲೂರು, ಹುಣಸೂರಿನಿಂದ ನಿಲ್ಲುತ್ತಾನೆ ಎಂದು ಹೇಳಲಾಗುತ್ತಿತ್ತು. ಹಾಗಾಗಲಿಲ್ಲ. ರಾಜರಾಜೇಶ್ವರಿ ನಗರದಿಂದ ಸ್ಪರ್ಧಿಸುತ್ತಾನೆ ಎಂದು ಈಗ ಹೇಳಲಾಗುತ್ತಿದೆ ಎಂದು ಹೇಳಿದರು.
ನಿಖಿಲ್ ವರ್ಚಸ್ಸು ಅಗತ್ಯ: ಕುಮಾರಸ್ವಾಮಿ ಪುತ್ರ ನಿಖಿಲ್ ಉದಯೋನ್ಮುಖ ಚಿತ್ರನಟನಾಗಿರುವುದರಿಂದ ಆತನ ವರ್ಚಸ್ಸು ಚುನಾವಣೆ ವೇಳೆ ಬಳಕೆಯಾಗುವುದಾದರೇ ಬೇಡವೆಂದು ಹೇಳಲು ಸಾಧ್ಯವಿಲ್ಲ. ನಟನಾಗಿ ಆತ ಜೆಡಿಎಸ್ ಪರ ಆನಂದಮಯವಾಗಿ ಪ್ರಚಾರ ಮಾಡಲಿ ಎಂದು ಹೇಳಿದರು.
ಪ್ರಜ್ವಲ್'ರಿಂದ ಪಕ್ಷಕ್ಕೆ ಮುಜುಗರ: ವಿಶ್ವನಾಥ್
ಮೈಸೂರು: ಪ್ರಜ್ವಲ್ ರೇವಣ್ಣ ನೀಡಿರುವ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರವಾಗಲಿದೆ ಎಂದು ಮಾಜಿ ಸಂಸದ ಎಚ್. ವಿಶ್ವನಾಥ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಅನುಭವಕ್ಕೂ, ಪ್ರಜ್ವಲ್ ಅನುಭವಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಬಿಸಿರಕ್ತದ ಯುವಕ ಪ್ರಜ್ವಲ್ ಈ ರೀತಿಯ ಹೇಳಿಕೆ ನೀಡಬಾರದು. ಸ್ಪರ್ಧೆ ಮಾಡಲು ಸಾಧ್ಯವಾಗದ ಕಾರಣ ಪ್ರಜ್ವಲ್ ಈ ರೀತಿ ಹೇಳಿಕೆ ನೀಡಿರಬಹುದು ಎಂದರು.
ಭವಿಷ್ಯಕ್ಕೆ ಏಟು: ಪ್ರಜ್ವಲ್ ಹೇಳಿಕೆ ಸರಿಯಲ್ಲ. ಒಮ್ಮೆ ತಪ್ಪು ಮಾಡಿದರೆ ಕ್ಷಮಿಸುತ್ತಾರೆ, ಆದರೆ ಪದೇ ಪದೆ ತಪ್ಪು ಮಾಡುತ್ತಿದ್ದರೆ ರಾಜಕೀಯ ಭವಿಷ್ಯಕ್ಕೆ ಏಟು ಬೀಳುತ್ತದೆ ಎಂದು ಶಾಸಕ ಜಿ.ಟಿ. ದೇವೇಗೌಡ ಎಚ್ಚರಿಸಿದರು.
Comments