ನಾನು ಯಾವುದೇ ಭೂಮಿ ಡಿನೋಟಿಫೈ ಮಾಡಿಲ್ಲ: ಸಿಎಂ ಸಿದ್ದರಾಮಯ್ಯ
ಬಿಜೆಪಿ ಎಂಎಲ್ ಸಿ ಬಿ. ಜೆ ಪುಟ್ಟಸ್ವಾಮಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಸಿದ್ದರಾಮಯ್ಯ ಬೆಂಗಳೂರು ಉತ್ತರ ತಾಲ್ಲೂಕಿನ ಭೂಪಸಂದ್ರ ಗ್ರಾಮದಲ್ಲಿ 6 ಎಕರೆ 26 ಗುಂಟೆ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಪುಟ್ಟಸ್ವಾಮಿ ಆರೋಪಿಸಿದ್ದಾರೆ.
ನಾನು ಅಧಿಕಾರಕಾರಕ್ಕೆ ಬಂದ ನಂತರ ಭೂಸ್ವಾಧೀನಕ್ಕಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ನಂತರ ಮತ್ತು ಅಂತಿಮ ಅಧಿಸೂಚನೆ ಆದ ಬಳಿಕ ಒಂದೇ ಒಂದು ಎಕರೆಯನ್ನೂ ಡಿನೋಟಿಫೈ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಸೋಲಿನ ಭಯದಿಂದ ಬಿಜೆಪಿ ನಾಯಕರು ಕಂಗಾಲಾಗಿದ್ದಾರೆ. ನಮ್ಮ ಸರ್ಕಾರದ ವರ್ಚಸ್ಸು ಸಹಿಸಲು ಸಾಧ್ಯವಾಗದೆ ರಾಜಕೀಯ ಉದ್ದೇಶಕ್ಕಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಡಿನೋಟಿಫೈ ಮಾಡುವುದಕ್ಕಾಗಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚನೆಯಾಗಿರುತ್ತದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಆರ್‌ಎಂವಿ ಬಡಾವಣೆಗೆ ಸಂಬಂಧಿಸಿದಂತೆ ಜಮೀನು ಹಕ್ಕು ಹಸ್ತಾಂತರಿಸುವ ಪ್ರಸ್ತಾವವೇ ಈ ಸಮಿತಿ ಮುಂದೆ ಬಂದಿಲ್ಲ. ಹೀಗಿರುವಾಗ ಡಿನೋಟಿಫೈ ಮಾಡಲು ಹೇಗೆ ಸಾಧ್ಯ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಶಾಸಕ ವಸಂತ ಬಂಗೇರಾ ಈ ಬಡಾವಣೆಯಲ್ಲಿನ 4 ಕಂದಾಯ ನಿವೇಶನಗಳಿಗೆ ಸಂಬಂಧಿಸಿದಂತೆ ನನಗೆ ಮನವಿಯೊಂದನ್ನು ಸಲ್ಲಿಸಿದ್ದರು. ಅದಕ್ಕೆ ಸಂಬಂಧಿಸಿದಂತೆ ಚರ್ಚಿಸಿ ಎಂದು ಟಿಪ್ಪಣಿ ಬರೆದಿದ್ದೆ. ಹಾಗೆಂದ ಮಾತ್ರಕ್ಕೆ ಅದು ಡಿನೋಟಿಫೈ ಮಾಡಿ ಎಂದು ಸೂಚನೆ ನೀಡಿದಂತೆ ಎಂದು ಭಾವಿಸಿದರೆ ಹೇಗೆ ಎಂದ ಅವರು ಅನಗತ್ಯವಾಗಿ ನನ್ನ ಮಗ ಡಾ. ಯತೀಂದ್ರ ಅವರನ್ನು ಪ್ರಕರಣಕ್ಕೆ ಎಳೆದು ತರಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
Comments