ಬಿ ಎಸ್ ವೈ ಯಡಿಯೂರಪ್ಪ ಸೇರಿದಂತೆ ಹಲವರ ಬಂಧನ

ಕೇರಳದಲ್ಲಿ ಆರ್ ಎಸ್‌ಎಸ್, ಬಿಜೆಪಿ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಬಿಜೆಪಿ ಜನರಕ್ಷಾ ಯಾತ್ರೆಯನ್ನು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಜನರಕ್ಷಾ ಯಾತ್ರೆ ಬೆಂಬಲಿಸಿ ಮಾಜಿ ಡಿಸಿಎಂ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ ನೇತೃತ್ವದಲ್ಲಿ ಬಿಜೆಪಿ ಯುವಮೋರ್ಚಾ ಬಸವನಗುಡಿಯಲ್ಲಿರುವ ಸಿಪಿಎಂ ಕಚೇರಿಗೆ ಮುತ್ತಿಗೆ ಹಾಕಲು ಪಾದಯಾತ್ರೆ ಆರಂಭಿಸಿತ್ತು.
ಕೇರಳದ ಜನರಕ್ಷಾ ಯಾತ್ರೆಯನ್ನು ಬೆಂಬಲಿಸಿ ರಾಜ್ಯ ಬಿಜೆಪಿ ಘಟಕ ಸೋಮವಾರ ಪಾದಯಾತ್ರೆ ಮೂಲಕ ಬಸವನಗುಡಿಯಲ್ಲಿರುವ ಸಿಪಿಎಂ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಮಾಜಿ ಡಿಸಿಎಂ ಆರ್.ಅಶೋಕ್, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾದಯಾತ್ರೆಯಲ್ಲಿ ಕಮ್ಯೂನಿಷ್ಟರ ಹಿಂಸಾಚಾರ ಕೊನೆಗೊಳ್ಳಲಿ, ಕಮ್ಯೂನಿಷ್ಟ್ ಗೂಂಡಾಗಿರಿ ವಿರುದ್ಧ ಜನರಕ್ಷಾ ಯಾತ್ರೆ ಎಂಬ ತಲೆಬರಹವುಳ್ಳ ಭಿತ್ತಿಪತ್ರ ಹಿಡಿದಿದ್ದರು. ಅಲ್ಲದೇ ಪಾದಯಾತ್ರೆಯಲ್ಲಿ ಬೃಹತ್ ಎಲ್ ಇಡಿ ಪರದೆಯನ್ನು ಅಳವಡಿಸಲಾಗಿತ್ತು. ಪರದೆಯಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರ ಹತ್ಯೆಯ ದೃಶ್ಯವನ್ನು ಬಿತ್ತರಿಸಲಾಗುತ್ತಿತ್ತು. ಘೋಷಣೆ ಕೂಗುತ್ತಾ ಸಾಗುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಹಾಗೂ ಬಿಜೆಪಿ ಮುಖಂಡರಾದ ಬಿಎಸ್ ವೈ, ಆರ್.ಆಶೋಕ್, ಶೋಭಾ ಕರಂದ್ಲಾಜೆ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳುವ ಮೂಲಕ ಸಿಪಿಎಂ ಕಚೇರಿಗೆ ಮುತ್ತಿಗೆ ಹಾಕುವುದನ್ನು ವಿಫಲಗೊಳಿಸಿದ್ದಾರೆ.
Comments