ಸಿಎಂ ಸಿದ್ದರಾಮಯ್ಯ ವಿರುದ್ಧ ದೇವೇಗೌಡರ ತೀವ್ರ ವಾಗ್ದಾಳಿ
ತುಮಕೂರು : ರಾಜ್ಯದಲ್ಲಿ ಜೆಡಿಎಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿರುವುದು ಅವರ ದುರಂಹಕಾರದ ಪರಮಾವಧಿಯಾಗಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ...
ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಹೇಳಿಕೆ ವಿಚಾರವಾಗಿ ಮುಖ್ಯಮಂತ್ರಿಗಳ ವಿರುದ್ಧ ದೇವೇಗೌಡರು ಗರಂ ಆದರು. ಮುಖ್ಯಮಂತ್ರಿಗೆ ಅಧಿಕಾರದ ಪಿತ್ತ ನೆತ್ತಿಗೇರಿದೆ. ಅಧಿಕಾರ, ಹಣ ಸಿದ್ದರಾಮಯ್ಯ ಅವರನ್ನು ಹೀಗೆ ಆಡಿಸುತ್ತಿದೆ, ಇದು ಶಾಶ್ವತವಲ್ಲ. ದೇಶದಲ್ಲಿ ಕಾಂಗ್ರೆಸ್ ಪಕ್ಷ ದಿನೇ ದಿನೇ ಅಳಿವಿನಂಚಿಗೆ ಸಾಗುತ್ತಿದೆ ಎಂಬ ಅರಿವು ನಿಮಗೆ ಇರಲಿ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದವರ್ಯಾರೂ ನಿಮ್ಮನ್ನು ಗುರುತಿಸಿರಲಿಲ್ಲ. ಸಿದ್ದರಾಮಯ್ಯನವರನ್ನು ಗುರುತಿಸಿದ್ದು ಜೆಡಿಎಸ್ ಪಕ್ಷ. ಉಪಮುಖ್ಯಮಂತ್ರಿ ಸ್ಥಾನ ನೀಡಿದ ಕೀರ್ತಿ ನಮ್ಮ ಪಕ್ಷದ್ದು. ನಂತರ ಕಾಂಗ್ರೆಸ್ ಪಕ್ಷದವರು ನಿಮ್ಮನ್ನು ಕರೆದುಕೊಂಡು ಹೋಗಿ ಅವರ ಮನೆಯಲ್ಲಿ ಕೂರಿಸಿಕೊಂಡಿದ್ದಾರೆ. ಕಾಂಗ್ರೆಸ್‍ಗೆ ಹೋಗಲು ಮುಖ್ಯ ಕಾರಣ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತು ಮೈಸೂರಿನ ವಿಶ್ವನಾಥ್ ಎಂಬುದನ್ನು ಮುಖ್ಯಮಂತ್ರಿ ಮರೆತಿದ್ದಾರೆ ಎಂದರು. ಜೆಡಿಎಸ್ ಮುಖಂಡ ಗೌರಿಶಂಕರ್, ಮಾಜಿ ಸಚಿವ ಚನ್ನಿಗಪ್ಪ ಅವರು ತುಮಕೂರು ಗ್ರಾಮಾಂತರದಲ್ಲಿ ಮನೆ ಮನೆಗೆ ಭೇಟಿ ನೀಡಿ ಜೆಡಿಎಸ್ ಪಕ್ಷದಲ್ಲಿ ಅಧಿಕಾರದಲ್ಲಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮತದಾರರಿಗೆ ಮುಟ್ಟಿಸುವ ಕೆಲಸ ಮಾಡಲಿದ್ದಾರೆ ಎಂದರು.
Comments