ಯಡಿಯೂರಪ್ಪ ಮನೆಗೆ ಬಂದ 18 ನಾಗಸಾಧುಗಳು ನುಡಿದ ಭವಿಷ್ಯ ವಾದರೂ ಏನು?

ನನ್ನ ಮನೆಯಲ್ಲಿ ಸುಮಾರು ಮೂವತ್ತು ನಿಮಿಷ ಸಾಧುಗಳು ತಂಗಿದ್ದರು. ರಾಜ್ಯ ರಾಜಕೀಯದ ಬಗ್ಗೆ ಈ ಸಂದರ್ಭದಲ್ಲಿ ಮಾತನಾಡಿದ್ದಾರೆ, ಮುಂದಿನ ಚುನಾವಣೆಯಲ್ಲಿ ನೂರಕ್ಕೂ ಹೆಚ್ಚು ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ, ನೀವು ಮತ್ತೆ ಸಿಎಂ ಆಗಲಿದ್ದೀರಿ ಎಂದು ಸಾಧುಗಳು ಹೇಳಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು .
ವಾರಣಾಸಿಯಿಂದ ದೇಶ ಸಂಚಾರ ಮಾಡಿಕೊಂಡು ಬಂದ ಹದಿನೆಂಟು ನಾಗಸಾಧುಗಳು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರನ್ನು ಆಶೀರ್ವದಿಸಿ ಹೋಗಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಯಡಿಯೂರಪ್ಪ, ನಾಗಸಾಧುಗಳು ಯಾರ ಮನೆಗೂ ಹೋಗುವ ಪದ್ದತಿಯಿಲ್ಲ. ಆದರೆ ನನ್ನ ಮನೆಗೆ ಬಂದು ನನ್ನನ್ನು ಹರಸಿ ಹೋಗಿದ್ದಾರೆ. ಇದು ನನ್ನ ಪೂರ್ವಜನ್ಮದ ಪುಣ್ಯದ ಫಲ ಎಂದು ಯಡಿಯೂರಪ್ಪ ಹೇಳಿದ್ದಾರೆ.
ನಾಗಸಾಧುಗಳು ನಮ್ಮ ಮನೆಗೆ ಭೇಟಿ ನೀಡುವ ವಿಚಾರ ನನಗೆ ತಿಳಿದಿರಲಿಲ್ಲ, ಪಕ್ಷದ ಕಾರ್ಯದ ನಿಮಿತ್ತ ಬೆಂಗಳೂರು ಹೊರವಲಯದಲ್ಲಿದ್ದೆ. ಸಾಧುಗಳು ನನ್ನ ಮನೆಗೆ ಬಂದಿದ್ದಾರೆ ಎನ್ನುವ ವಿಚಾರವನ್ನು ಅರಿತು, ನನ್ನ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಮನಗೆ ಹೋದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಕೇಂದ್ರದಲ್ಲೂ ನರೇಂದ್ರ ಮೋದಿ ಸರಕಾರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ.
ಮುಂದಿನ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಗೆದ್ದು, ಮೋದಿ ಮತ್ತೆ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆಂದು ನಾಗಸಾಧುಗಳು ಆಶೀರ್ವದಿಸಿದ್ದಾರೆ ಎಂದು ಯಡಿಯೂರಪ್ಪ ಸಂತಸ ವ್ಯಕ್ತ ಪಡಿಸಿದರು. ಯಾವುದೇ ಆಹ್ವಾನವಿಲ್ಲದೇ ನಾಗಸಾಧುಗಳು ಯಡಿಯೂರಪ್ಪನವರ ಮನೆಗೆ ಬಂದಿದ್ದರು. ನಾಗಸಾಧುಗಳನ್ನು ಕಂಡು ದಂಗಾದ ಬಿಎಸ್ವೈ ಮನೆಯಲ್ಲಿದ್ದವರು, ಯಡಿಯೂರಪ್ಪನವರಿಗೆ ವಿಷಯ ಮುಟ್ಟಿಸಿದರಂತೆ.
Comments