ಸಿದ್ದರಾಮಯ್ಯ ಸರ್ಕಾರ ಜಾಹೀರಾತಿನ ಸರ್ಕಾರ ಎಂದು ಟೀಕಿಸಿದ ಜಗದೀಶ್ ಶೆಟ್ಟರ್

ಸಿದ್ದರಾಮಯ್ಯ ಸರ್ಕಾರ ಜಾಹೀರಾತಿನ ಸರ್ಕಾರ ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ. ಜಾಹೀರಾತಿನಲ್ಲಿ 2013-14ರಲ್ಲಿ 27.81ಕೋಟಿ , 2016-17ರಲ್ಲಿ 71.64 ಕೋಟಿ ರೂ.ಗಳಷ್ಟು ವಾರ್ತಾ ಇಲಾಖೆಯಿಂದ ಖರ್ಚಾಗಿದೆ. ಬೇರೆ ಬೇರೆ ಇಲಾಖೆಯಿಂದ ಖರ್ಚಾಗಿರುವ ಲೆಕ್ಕ ಇನ್ನೂ ಸಿಕ್ಕಿಲ್ಲ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್ , ಸರ್ಕಾರ ಜಾರಿಗೊಳಿಸಿರುವ ಕೃಷಿ ಸಾಲ ಮನ್ನಾ ಯೋಜನೆ ಸಂಪೂರ್ಣ ವಿಫಲವಾಗಿದೆ 50ಸಾವಿರದವರೆಗೆ ಸಾಲ ಮನ್ನಾ ಮಾಡುವುದಾಗಿ ವಿಧಾನಸಭೆಯಲ್ಲಿ ಘೋಷಿಸಿದ್ದರು. ಈ ಘೋಷಣೆ ನಂತರ ಸಹಕಾರ ಸಂಘದವರಿಗೆ ಸರ್ಕಾರ ಮೂರೂವರೆ ಸಾವಿರ ಕೋಟಿ ಹಣ ಬಿಡುಗಡೆ ಮಾಡಬೇಕಿತ್ತು. ಆದರೆ, ಇದುವರೆಗೂ ಹಣ ಬಿಡುಗಡೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಲ ಮನ್ನಾ ಯೋಜನೆ ಸೌಲಭ್ಯ ಪಡೆಯಬೇಕಾದರೆ ಬಾಕಿ ವಸೂಲಿ ಪಾವತಿಸಬೇಕೆಂಬ ಷರತ್ತು ವಿಧಿಸಲಾಗಿದೆ. ನಾನು ಸಿಎಂ ಆಗಿದ್ದಾಗ ಯಾವುದೇ ಷರತ್ತು ಇಲ್ಲದೆ ಸಾಲ ಮನ್ನಾ ಮಾಡಿದ್ದೆ. ಆದರೆ, ಸಿದ್ದರಾಮಯ್ಯ ಸರ್ಕಾರ 14 ಷರತ್ತು ವಿಧಿಸಿದೆ. ಇದರಿಂದ ರೈತರಿಗೆ ಒಂದು ಪೈಸೆನೂ ಸಿಕ್ಕಿಲ್ಲ ಎಂದು ದೂರಿದರು. ಕೈಗಾರಿಕಾ ಕ್ಷೇತ್ರದಲ್ಲಿ ನಿರೀಕ್ಷಿತ ಸಾಧನೆಯಾಗಿಲ್ಲ. ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ನಂ.1ಎಂದು ಹೇಳುತ್ತಿದ್ದಾರೆ. 6ಲಕ್ಷ ಉದ್ಯೋಗದಲ್ಲಿ 1 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಸಿದ್ದು ಸರ್ಕಾರದಲ್ಲಿ ಸಮರ್ಥ ಸಚಿವರು ಎಂದು ಹೇಳುವ ಎಚ್.ಕೆ.ಪಾಟೀಲ್ ಅವರು ಕರ್ನಾಟಕವನ್ನು ಬಯಲು ಶೌಚಾಲಯ ಮುಕ್ತ ರಾಜ್ಯವನ್ನಾಗಿ ಮಾಡಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
Comments