ಜೆಡಿಎಸ್ ಶಾಸಕಾಂಗ ಸಭೆ : ರಾಜ್ಯದೆಲ್ಲೆಡೆ 'ಮನೆ- ಮನೆಗೆ ಎಚ್ಡಿಕೆ

ಬೆಂಗಳೂರು : 'ಮನೆ- ಮನೆಗೆ ಕುಮಾರಣ್ಣ 'ಕಾರ್ಯಕ್ರಮವನ್ನು ರಾಜ್ಯದೆಲ್ಲೆಡೆಗೆ ವಿಸ್ತರಿಸಲು ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ನಿರ್ಧರಿಸಲಾಗಿದೆ. ತುಮಕೂರಿನಲ್ಲಿ ಬುಧವಾರದಂದು ವಿದ್ಯುಕ್ತವಾಗಿ ಈ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಸಭೆ ನಂತರ ಮಾತನಾಡಿ, '224 ವಿಧಾನಸಭಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲು ನಿರ್ಧರಿಸಲಾಗಿದೆ. ಈಗ ಇರುವ 33 ಕ್ಷೇತ್ರಗಳನ್ನು ಉಳಿಸಿಕೊಳ್ಳುವುದರ ಜತೆಗೆ ಉಳಿದ ಕ್ಷೇತ್ರಗಳನ್ನೂ ಗೆಲ್ಲುವ ಪ್ರಯತ್ನ ನಡೆಸಬೇಕಾಗಿದೆ. ಈ ಉದ್ದೇಶಕ್ಕಾಗಿ ಹಲವರಿಗೆ ಜವಾಬ್ದಾರಿಗಳನ್ನು ನೀಡಲಾಗಿದೆ' ಎಂದರು.
ಸರಣಿ ಸಮಾವೇಶಗಳು: ಅಕ್ಟೋಬರ್ ಅಂತ್ಯದಲ್ಲಿ ಹಿಂದುಳಿದ ವರ್ಗಗಳ ಸಮಾವೇಶ,ನವೆಂಬರ್ನಲ್ಲಿ ಬೃಹತ್ ರೈತ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಕನ್ನಡ ನೆಲ, ಜಲ, ಭಾಷೆ ಬದ್ಧತೆ ಪ್ರದರ್ಶನ: ರಾಷ್ಟ್ರೀಯ ಪಕ್ಷಗಳು ಕರ್ನಾಟಕ ವನ್ನು ಕಡೆಗಣಿಸಿರುವ ಬಗ್ಗೆ ಮತದಾರರಿಗೆ ಮನವರಿಕೆ ಮಾಡುವುದರ ಜತೆಗೆ, ಕನ್ನಡ ನೆಲ, ಜಲ, ಭಾಷೆ ರಕ್ಷಣೆಗೆ ಬದ್ಧತೆ ಪ್ರದರ್ಶಿಸುವಲ್ಲಿ ರಾಷ್ಟ್ರೀಯ ಪಕ್ಷಗಳು ತೋರಿರುವ ನಿರ್ಲಕ್ಷ್ಯವನ್ನು ಜನರಿಗೆ ತಿಳಿಸಬೇಕಿದೆ ಎಂದು ದೇವೇಗೌಡರು ಹೇಳಿದರು.
ಎಚ್ಡಿಕೆ ಪ್ರವಾಸ: ನನ್ನ ಆರೋಗ್ಯ ಸುಧಾರಿಸುತ್ತಿದೆ. ಆದಷ್ಟು ಬೇಗ ಚೇತರಿಸಿಕೊಂಡು ಪಕ್ಷ ಸಂಘಟನೆಗೆ ನಿಮ್ಮ ಜತೆ ಸೇರಿಕೊಳ್ಳುತ್ತೇನೆ. ನವೆಂಬರ್ 01ರಿಂದ ಪಕ್ಷ ಸಂಘಟನೆಗೆ ರಾಜ್ಯ ಪ್ರವಾಸ ಮಾಡುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ತಿಳಿಸಿದರು. ಹೃದಯ ಶಸ್ತ್ರಚಿಕಿತ್ಸೆ ಒಳಗಾಗಿ ಗುಣಮುಖರಾಗಿರುವ ಎಚ್ ಡಿ ಕುಮಾರಸ್ವಾಮಿ ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ.
Comments