ಕನ್ನಡಿಗರ ಮೇಲೆ ಗೋವಾ ಸರ್ಕಾರದ ದಬ್ಬಾಳಿಕೆ

26 Sep 2017 5:02 PM | Politics
257 Report

ಬೈನಾ ಬೀಚ್‍ನಲ್ಲಿ ಮನೆ, ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದ ಕನ್ನಡಿಗರನ್ನು ಯಾವುದೇ ಮುನ್ಸೂಚನೆ ಕೊಡದೆ ಸ್ಥಳೀಯ ಅಧಿಕಾರಿಗಳು ಮನೆಯನ್ನು ತೆರವುಗೊಳಿಸಿ, ಮುಂಜಾನೆ 5 ಗಂಟೆ ಸಮಯದಲ್ಲಿ ಬಲವಂತವಾಗಿ ಜಿಲ್ಲಾಡಳಿತ ಹೊರಹಾಕಿದೆ ಎಂದು ಸ್ಥಳೀಯರು ದೂರಿದ್ದಾರೆ. ಈಗ ಯಾವುದೇ ಆಶ್ರಯ ಇಲ್ಲ ಎಂದು ಸೂರು ಕಳೆದುಕೊಂಡ ನೂರಾರು ಮಂದಿ ಕನ್ನಡಿಗರು ಕಣ್ಣೀರು ಹಾಕಿದ್ದಾರೆ.

ಕನ್ನಡಿಗರನ್ನು ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ತೆರವುಗೊಳಿಸುವ ಮೂಲಕ ಮತ್ತೊಮ್ಮೆ ದಬ್ಬಾಳಿಕೆ ಪ್ರದರ್ಶಿಸಿದೆ. ಇಲ್ಲಿನ ಬೈನಾ ಬೀಚ್‍ನಲ್ಲಿ ಕಳೆದ 40 ವರ್ಷಗಳಿಂದ ವಾಸ ಮಾಡುತ್ತಿದ್ದ ಬಹುತೇಕ ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಮತ್ತಿತರ ಕನ್ನಡಿಗರನ್ನು ಬೆಳಗ್ಗೆ ಮನೆಯಿಂದ ಹೊರಹಾಕುವ ಮೂಲಕ ಗೋವಾ ಸರ್ಕಾರ ತನ್ನ ಅಟ್ಟಹಾಸದ ದುಷ್ಕೃತ್ಯ ಮುಂದುವರೆಸಿದೆ. ಮೂಲಗಳ ಪ್ರಕಾರ 6 ಜೆಸಿಬಿ, 10 ಟಿಪ್ಪರ್‍ಗಳ ಮೂಲಕ ಮನೆಗಳನ್ನು ತೆರವುಗೊಳಿಸಲಾಗಿದೆ. ಮನೆಗಳನ್ನು ಒಡೆದು ಹಾಕಬೇಡಿ ಎಂದು ಕನ್ನಡಿಗರು ಪರಿಪರಿಯಾಗಿ ಬೇಡಿಕೊಂಡರೂ, ಯಾವುದಕ್ಕೂ ಕರುಣೆ ತೋರದೆ ಮನೆಗಳನ್ನು ತೆರವುಗೊಳಿಸಿದ್ದಾರೆ. ಮನೆಗಳನ್ನು ಕಟ್ಟಿಕೊಂಡಿದ್ದ ಜಾಗದಲ್ಲಿ ಚರ್ಚ್ ನಿರ್ಮಿಸಲು ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಆದರೆ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ತೆರವು ಮಾಡಿ ಉದ್ಧಟತನ ತೋರಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. 

ಕನ್ನಡಿಗರ ಆಕ್ರೋಶ: ಬೀದಿಪಾಲಾಗಿರುವ ನೂರಾರು ಕುಟುಂಬಗಳು ಬೀದಿಗೆ ಬಿದ್ದಿದ್ದರೂ ಕರ್ನಾಟಕ ಸರ್ಕಾರ ಯಾವುದೇ ನೆರವು ನೀಡಿಲ್ಲ ಎಂದು ನೊಂದ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಸಚಿವರು, ಸ್ಥಳೀಯ ಶಾಸಕರು, ಅಧಿಕಾರಿಗಳ ಜೊತೆ ಕರ್ನಾಟಕ ಸರ್ಕಾರ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಗೊಳಿಸಬಹುದಿತ್ತು ಎಂಬುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

Edited By

Hema Latha

Reported By

Madhu shree

Comments