ಪಾಕಿಸ್ತಾನದ ದುಷ್ಕೃತ್ಯದಿಂದ ಉಂಟಾದ ನೋವಿನ ನಿಜ ಚಿತ್ರ : ತ್ರಿಪಾಠಿ

ಪಾಕಿಸ್ತಾನದ ಖಾಯಂ ಪ್ರತಿನಿಧಿ ಈ ಸಭೆಯಲ್ಲಿ ಈ ಫೋಟೋ ಪ್ರದರ್ಶಿಸಿ ಅದನ್ನು ತಪ್ಪು ದಾರಿಗೆಳೆದಿದ್ದಾರೆ. ಪಾಕಿಸ್ತಾನ ಈ ರೀತಿ ಮಾಡಿದ್ದರಿಂದ ಭಾರತವು ಪಾಕಿಸ್ತಾನದ ದುಷ್ಕೃತ್ಯದಿಂದ ಉಂಟಾದ ನೋವಿನ ನಿಜ ಚಿತ್ರವನ್ನು ತೋರಿಸುವ ಅನಿವಾರ್ಯತೆ ನಮಗೆದುರಾಯಿತು'' ಎಂದು ತ್ರಿಪಾಠಿ ಹೇಳಿದರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಫೋಟೋವೊಂದನ್ನು ಎಲ್ಲರೆದುರು ಪ್ರದರ್ಶಿಸಿತ್ತು. ಅದು ಕಾಶ್ಮೀರದಲ್ಲಿ ಈ ವರ್ಷದ ಮೇ ತಿಂಗಳಲ್ಲಿ ಉಗ್ರರು ಮದುವೆ ಮನೆಯಿಂದ ಎಳೆದೊಯ್ದು ಗುಂಡಿಕ್ಕಿ ಕೊಂದ ಯುವ ಸೇನಾಧಿಕಾರಿ ಉಮರ್ ಫಯಾಝ್ ಅವರದ್ದಾಗಿತ್ತು. ಭಾರತವನ್ನು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತಿನಿಧಿಸಿದ್ದ ರಾಜತಾಂತ್ರಿಕ ಅಧಿಕಾರಿ ಪೌಲೋಮಿ ತ್ರಿಪಾಠಿ ಸಭೆಯಲ್ಲಿ ಮಾತನಾಡುತ್ತಾ, ಗಾಝಾದ ಕೆಲವೊಂದು ಚಿತ್ರಗಳನ್ನು ಕಾಶ್ಮೀರದ್ದೆಂದು ಬಿಂಬಿಸಿ ನಕಲಿ ಫೋಟೊಗಳನ್ನು ಪ್ರದರ್ಶಿಸಿ ಪಾಕಿಸ್ತಾನ ಮುಚ್ಚಿಡಲು ಯತ್ನಿಸುತ್ತಿರುವ ವಾಸ್ತವ ಇದಾಗಿದೆ ಎಂದು ಬಣ್ಣಿಸಿದರು. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಖಾಯಂ ಪ್ರತಿನಿಧಿಯಾಗಿರುವ ಮಲೀಲಾ ಲೋಧಿ ಶನಿವಾರ ಪ್ರದರ್ಶಿಸಿದ ಫೋಟೊವನ್ನು ಉಲ್ಲೇಖಿಸಿ ಭಾರತದ ಅಧಿಕಾರಿ ಮೇಲಿನಂತೆ ಹೇಳಿದ್ದರು. ಮುಖದಲ್ಲಿ ಹಲವಾರು ಗಾಯಗಳು ಕಂಡುಬಂದಿದ್ದ ಆ ಚಿತ್ರದಲ್ಲಿದ್ದ ಯುವತಿ ಕಾಶ್ಮೀರದಲ್ಲಿ ಪೆಲ್ಲೆಟ್ ಗನ್ ಗಳ ಸಂತ್ರಸ್ತೆ ಹಾಗೂ ಇದು ಭಾರತವು ಕಾಶ್ಮೀರದಲ್ಲಿ ನಡೆಸುತ್ತಿರುವ ದೌರ್ಜನ್ಯಕ್ಕೆ ಸಾಕ್ಷಿ ಎಂದು ಲೋಧಿ ಸಭೆಯಲ್ಲಿ ಹೇಳಿದ್ದಕ್ಕೆ ಪ್ರತಿಯಾಗಿ ಭಾರತದ ಅಧಿಕಾರಿ ಮೇಲಿನ ಹೇಳಿಕೆ ನೀಡಿದ್ದಾರೆ.ಆದರೆ ವಾಸ್ತವವಾಗಿ ಪಾಕ್ ಪ್ರದರ್ಶಿಸಿದ ಈ ಫೋಟೊ ಫೆಲೆಸ್ತೀನಿ ನಿವಾಸಿ ರವ್ಯ ಅಬು ಜೊಮ ಅವರದ್ದಾಗಿತ್ತು. ಖ್ಯಾತ ಛಾಯಾಗ್ರಾಹಕ ಹೀಡಿ ಲೆವಿನ್ ಅವರು 2014ರಲ್ಲಿ ಇದನ್ನು ಸೆರೆ ಹಿಡಿದಿದ್ದರಲ್ಲದೆ, ಅದು ಅವರಿಗೆ ಪ್ರಶಸ್ತಿಯನ್ನು ಕೂಡ ತಂದು ಕೊಟ್ಟಿತ್ತು. ಇಸ್ರೇಲಿನ ವಾಯು ದಾಳಿಯಲ್ಲಿ ಗಾಯಗೊಂಡ 17ರ ಯುವತಿಯ ಫೋಟೋ ಅದಾಗಿತ್ತು.
Comments