ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಡಿ.ವಿ. ಸದಾನಂದ ಗೌಡ ನೇಮಕ

ಬೆಂಗಳೂರು : ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಚಿಸಲಾಗಿರುವ ಬಿಜೆಪಿ ಸಾಂಪ್ರದಾಯಿಕ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರನ್ನು ನೇಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಮೂಲಕ, ಕೆಲ ವರ್ಷಗಳಿಂದ ರಾಜ್ಯ ರಾಜಕೀಯದಿಂದ ದೂರ ಉಳಿದಿದ್ದ ಸದಾನಂದ ಗೌಡರು, ಈಗ ಮತ್ತೆ ರಾಜ್ಯಕ್ಕೆ ಮರಳಿದ್ದಾರೆ. ಕೇಂದ್ರ ಸಾಂಖ್ಯಿಕ ಖಾತೆ ಸಚಿವರಾಗಿರುವ ಡಿ.ವಿ. ಸದಾನಂದ ಗೌಡ ಅವರು ಸೇವೆ ಸಲ್ಲಿಸುತ್ತಿದ್ದಾರೆ.
ಈ ಪ್ರಚಾರ ಸಮಿತಿಯಲ್ಲಿ, ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಶೋಭಾ ಕರಂದ್ಲಾಜೆ, ಆರ್. ಅಶೋಕ್, ಜಗ್ಗೇಶ್, ತೇಜಸ್ವಿನಿ ಗೌಡ ಸೇರಿದಂತೆ 28 ಬಿಜೆಪಿ ನಾಯಕರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಈಗಾಗಲೇ ಮಿಷನ್ 150 ಎಂಬ ಧ್ಯೇಯದೊಂದಿಗೆ ಚುನಾವಣೆ ಎದುರಿಸಲು ಸಿದ್ಧವಾಗಿರುವ ರಾಜ್ಯ ಬಿಜೆಪಿಯು ಈಗಾಗಲೇ ಚುನಾವಣೆಗೆ ಬೇಕಾದ ಪೂರ್ವ ತಯಾರಿಗಳನ್ನು ಆರಂಭಿಸಿದ್ದು, ವಿಶೇಷ ಕಾರ್ಯತಂತ್ರಗಳನ್ನು ರೂಪಿಸುವುದರಲ್ಲಿ ಮಗ್ನವಾಗಿದೆ. ಅದರ ಒಂದು ಭಾಗವಾಗಿ, ಈಗ ಡಿ.ವಿ. ಸದಾನಂದ ಗೌಡ ಅವರನ್ನು ರಾಜ್ಯ ರಾಜಕಾರಣಕ್ಕೆ ಹಿಂತಿರುಗಿಸಲಾಗಿದೆ.
Comments