ಮುಂದಿನ ವಿಧಾನ ಸಭಾ ಕ್ಷೇತ್ರ ಚುನಾವಣೆಗೆ ಉತ್ತರ ಕರ್ನಾಟಕದಿಂದ ಸ್ಪರ್ಧಿಸುವುದು ಎಂದು ಖಚಿತಪಡಿಸಿದ ಬಿಎಸ್ವೈ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕದಿಂದ ಸ್ಪರ್ಧೆ ಮಾಡುವ ನಿರ್ಧಾರ ಹೊರಬಿದ್ದಿದೆ. ಶನಿವಾರ ರಾತ್ರಿ ನಡೆದ ಕೋರ್ ಕಮಿಟಿ ಸಭೆ ವೇಳೆ ಸ್ವತಃ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕರೆ ಮಾಡಿ ಈ ಸಲಹೆ ನೀಡಿದ್ದು, ಪಕ್ಷದ ಹಿತವೇ ನನ್ನ ಹಿತ ಎಂದು ಬಿಎಸ್ವೈ ಒಪ್ಪಿಗೆ ನೀಡಿದ್ದಾರೆ.
ಉತ್ತರ ಕರ್ನಾಟಕವನ್ನು ಕರ್ನಾಟಕ ಬಿಜೆಪಿಯ ಬೆನ್ನೆಲುಬು ಎಂದೇ ಹೇಳಲಾಗುತ್ತದೆ. ಅತಿ ಹೆಚ್ಚು ಸದಸ್ಯರು ಈ ಭಾಗದಿಂದಲೇ ಆಯ್ಕೆಯಾಗುತ್ತಿದ್ದಾರೆ. 2018ರ ಚುನಾವಣೆಯಲ್ಲಿ ಈ ಸಮೀಕರಣವನ್ನು ಮುರಿಯಲು ವೀರಶೈವ-ಲಿಂಗಾಯತ ಸ್ವತಂತ್ರ ಧರ್ಮ ವಿಚಾರಕ್ಕೆ ಪ್ರಾಮುಖ್ಯತೆ ನೀಡಿ ಲಾಭ ಪಡೆಯಲು ಕಾಂಗ್ರೆಸ್ ಮುಂದಾಗಿತ್ತು. ಈ ತಂತ್ರಕ್ಕೆ ಪ್ರತಿಯಾಗಿ ನೀವೇ ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸಿ ಎಂದು ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಮತ್ತು ಪೀಯೂಷ್ ಗೋಯೆಲ್ ಬಿಎಸ್ವೈಗೆ ಸಲಹೆ ನೀಡಿದ್ದಾರೆ. ಇದೇ ವೇಳೆಗೆ ಸ್ವತಃ ಅಮಿತ್ ಷಾ ಕರೆ ಮಾಡಿ ಯಡಿಯೂರಪ್ಪ ಜತೆ ಮಾತನಾಡಿದ್ದಾರೆ.
ಉತ್ತರ ಕರ್ನಾಟಕದಲ್ಲಿ ನೀವು ಸ್ಪರ್ಧಿಸುವುದರಿಂದ ಪಕ್ಷಕ್ಕೆ ಅನುಕೂಲವಾಗಲಿದೆ. ಶಿಕಾರಿಪುರದ ಮೇಲೆ ನಿಮಗಿರುವ ಬಾಂಧವ್ಯದ ಅರಿವು ನನಗಿದೆ. ಆದರೆ ಈಗಿನ ಅವಶ್ಯಕತೆ ನೀವು ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸುವುದು ಎಂದು ಷಾ ಮನವರಿಕೆ ಮಾಡಿದ್ದಾರೆ. ಬಿಎಸ್ವೈ ತಕ್ಷಣವೇ ‘ಪಕ್ಷದ ಹಿತವೇ ನನ್ನ ಹಿತ. ಯಾವುದೇ ನಿರ್ಧಾರಕ್ಕೆ ನಾನು ಬದ್ಧ’ ಎಂದು ಒಪ್ಪಿಗೆ ನೀಡಿದರು. ಅಮಿತ್ ಷಾ ಎಲ್ಲಿಯೂ ತಮ್ಮ ನಿರ್ಧಾರವನ್ನು ಹೇರದೆ ವಿನಯದಿಂದ ವಿಚಾರವನ್ನು ಮುಂದಿಟ್ಟರು ಎಂದು ಮೂಲಗಳು ತಿಳಿಸಿವೆ.
Comments