ಸೆಪ್ಟೆಂಬರ್24 ರಂದು ಕಾಂಗ್ರೆಸ್ ಪಕ್ಷದ ಸಚಿವರು-ಶಾಸಕರ ಬಣ್ಣ ಬಯಲುಮಾಡುತ್ತೇವೆ : ಬಿಎಸ್‍ವೈ

ಸಿದ್ದರಾಮಯ್ಯನವರ ಸರ್ಕಾರವು ಭ್ರಷ್ಟಾಚಾರಕ್ಕೆ ಹೊರತಾಗಿಲ್ಲ. ಎಲ್ಲ ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹಣ ಕೊಡದೆ ಏನೂ ನಡೆಯದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸಿದ್ದರಾಮಯ್ಯ ಹಾಗೂ ಅವರ ಸಹೋದ್ಯೋಗಿಗಳು ನಡೆಸಿರುವ ಭ್ರಷ್ಟಾಚಾರದ ಹಗರಣಗಳನ್ನು ಮನೆ ಮನೆಗೆ ತಲುಪಿಸುತ್ತೇವೆ ಎಂದು ಯಡಿಯೂರಪ್ಪ ಗುಡುಗಿದರು.
ನಾಲ್ಕೈದು ಸಚಿವರು ಹಾಗೂ ಕೆಲ ಶಾಸಕರು ಅನೇಕ ಕಡೆ ನಡೆಸಿರುವ ಭ್ರಷ್ಟಾಚಾರದ ಕಡತಗಳನ್ನು ನಾವು ಕಲೆ ಹಾಕಿದ್ದೇವೆ. ಸಿದ್ದರಾಮಯ್ಯ ಅವರ ಸಂಪುಟದ ಸಹೋದ್ಯೋಗಿಗಳು ಮತ್ತು ಕಾಂಗ್ರೆಸ್ ಪಕ್ಷದ ಶಾಸಕರು ನಡೆಸಿರುವ ಭ್ರಷ್ಟಾಚಾರದ ಹಗರಣಗಳ ಕುರಿತ ಚಾರ್ಜ್‍ಶೀಟ್‍ಗಳನ್ನು ಸೆ.24ರ ನಂತರ ಬಿಡುಗಡೆ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಪಕ್ಷದ ಕಚೇರಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಅಂಜನ್‍ಕುಮಾರ್, ನಿವೃತ್ತ ಹೆಚ್ಚುವರಿ ಎಸ್ಪಿ ಪಾಪಯ್ಯ ಸೇರಿದಂತೆ ಕೆಲವು ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಅವರು ಮಾತನಾಡಿದರು. ಸಿದ್ದರಾಮಯ್ಯನವರ ಸರ್ಕಾರವು ಭ್ರಷ್ಟಾಚಾರಕ್ಕೆ ಹೊರತಾಗಿಲ್ಲ. ಎಲ್ಲ ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹಣ ಕೊಡದೆ ಏನೂ ನಡೆಯದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು.
ಲೋಕಾಯುಕ್ತ ಹಾಗೂ ಎಸಿಬಿಯಲ್ಲಿ ಸಿದ್ದರಾಮಯ್ಯ ಮತ್ತು ಕೆಲ ಸಚಿವರ ವಿರುದ್ಧ ಒಟ್ಟು 35ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ವಿರೋಧ ಪಕ್ಷಗಳ ನಾಯಕರ ವಿರುದ್ದ ದೂರು ನೀಡಿದರೆ ಎರಡೇ ದಿನದಲ್ಲಿ ಎಫ್‍ಐಆರ್ ದಾಖಲಾಗುತ್ತದೆ. ಇವರ ವಿರುದ್ದ ದೂರು ಕೊಟ್ಟು ವರ್ಷ ಕಳೆದರೂ ಏಕೆ ಕ್ರಮ ಜರುಗಿಸಿಲ್ಲ ಎಂದು ಪ್ರಶ್ನಿಸಿದರು.ದೇಶದಲ್ಲಿ 40 ಸ್ಥಾನಗಳನ್ನು ಗೆಲ್ಲಲಾಗದೆ ಅಧಿಕೃತ ವಿರೋಧ ಪಕ್ಷದ ಮಾನ್ಯತೆಯನ್ನು ಕಾಂಗ್ರೆಸ್ ಪಡೆದಿಲ್ಲ. ಹೀಗಿರುವಾಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಮೆರಿಕದಲ್ಲಿ ನಾನೇ ಮುಂದಿನ ಪ್ರಧಾನಿ ಎಂದು ನಗೆಪಾಟಲಿಗೆ ಈಡಾಗಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು. ಈ ಸರ್ಕಾರ ಹೆಚ್ಚೆಂದರೆ ಆರು ತಿಂಗಳು ಮಾತ್ರ ಇರಬಹುದು. ಈಗಾಗಲೇ ಚುನಾವಣೆ ಸಿದ್ದತೆಗಳು ಆರಂಭಗೊಂಡಿವೆ. ಯಾವುದೇ ಸಂದರ್ಭದಲ್ಲೂ ಚುನಾವಣೆ ಎದುರಾದರೂ ಧೈರ್ಯದಿಂದ ಎದುರಿಸುತ್ತೇವೆ ಎಂದು ಹೇಳಿದರು.
Comments