ಸಿಎಂ ಸಿದ್ದರಾಮಯ್ಯ ಬಯಸಿದರೆ ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ : ಕೆ.ಜೆ.ಜಾರ್ಜ್

08 Sep 2017 4:27 PM | Politics
382 Report

ಬೆಂಗಳೂರು : ಬಿಜೆಪಿಯವರಿಗೆ ಡಿವೈಎಸ್ಪಿ ಎಂ.ಕೆ.ಗಣಪತಿ ಸಾವಿನ ಪ್ರಕರಣದ ಸತ್ಯಾಂಶ ಬೇಕಿಲ್ಲ. ರಾಜಕೀಯ ಕಾರಣಕ್ಕಾಗಿ ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಡಿ.ಕೆ.ರವಿ ಪ್ರಕರಣದಲ್ಲೂ ಇದೇ ಆಗಿತ್ತು ಎಂದು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ  ಮಾತನಾಡಿದ ಅವರು, ಈ ಪ್ರಕರಣಗಳಲ್ಲಿ ಬಿಜೆಪಿಯವರಿಗೆ ಸತ್ಯಾಂಶ ಬೇಕಾಗಿಲ್ಲ. ಅವರಿಗೆ ರಾಜೀನಾಮೆ ಬೇಕಾಗಿದೆ. ಡಿ.ಕೆ.ರವಿ ಪ್ರಕರಣದಲ್ಲಿ ಸಿಬಿಐ ನನಗೆ ಕ್ಲೀನ್‍ಚಿಟ್ ನೀಡಿದೆ. ಗಣಪತಿ ಪ್ರಕರಣದಲ್ಲಿ ಸಿಐಡಿ ಕ್ಲೀನ್‍ಚಿಟ್ ನೀಡಿದೆ. ಸುಪ್ರೀಂಕೋರ್ಟ್ ಸಿಬಿಐಗೆ ವಹಿಸಿದೆ. ತನಿಖೆ ನಡೆಯಲಿ, ಸತ್ಯಾಂಶ ಹೊರಬರಲಿ. ಇದನ್ನು ಆಗ್ರಹಿಸುವುದನ್ನು ಬಿಟ್ಟು ಬಿಜೆಪಿಯವರಿಗೆ ರಾಜೀನಾಮೆ ಕೇಳುವ ನೈತಿಕತೆ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನ ರಾಜೀನಾಮೆ ಬಯಸಿದರೆ ನಾನು ಒಂದು ಕ್ಷಣವೂ ನನ್ನ ಸ್ಥಾನದಲ್ಲಿ ಇರಲಾರೆ ಎಂದು ಹೇಳಿದರು.

ಮುಂದಿನ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ ನವರೇ ಮತ್ತೆ ಸಿಎಂ ಆಗುತ್ತಾರೆ. ನನ್ನನ್ನು ಅಲ್ಪಸಂಖ್ಯಾತ ಸಚಿವ ಎಂದು ಏಕೆ ಕರೆಯುತ್ತೀರಿ. ಕಾಂಗ್ರೆಸ್ ಪಕ್ಷ ಬಹು ಸಂಖ್ಯಾತರ ಪಕ್ಷ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನಮ್ಮ ಪಕ್ಷವಿದೆ. ನಾವು ಬಹುಸಂಖ್ಯಾತರ ನಾಯಕರು ಎಂದು ಅವರು ಹೇಳಿದರು.

Courtesy: eesanje

Comments