ಕೈಗೆ ಸಿಗದ ಪರಂ, ಎಲ್ಲಿ ಹೋದರು !

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರು ಕಾಣಿಸುತ್ತಿಲ್ಲ. ಶನಿವಾರವು ಮನೆಯಲ್ಲಿಯೇ ಉಳಿದು ಯಾರಿಗೂ ಭೇಟಿಗೆ ಅವಕಾಶ ನೀಡದೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಶುಕ್ರವಾರ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿಯೇ ಇದ್ದರೂ ಕಾರ್ಯಕ್ರಮದಿಂದ ದೂರ ಉಳಿದು ಸಿಎಂ ಸಿದ್ದರಾಮಯ್ಯ ಅವರ ಏಕ ಪಕ್ಷೀಯ ನಿರ್ಧಾರದ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎನ್ನುತ್ತಿವೆ ಮೂಲಗಳು. ಈ ಬಗ್ಗೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ, ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ಪರಮೇಶ್ವರ್ ಇದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.ತಿಪಟೂರು ಶಾಸಕ ಷಡಕ್ಷರಿಗೆ ಸಂಪುಟದಲ್ಲಿ ಸ್ಥಾನ ಕೊಡಿಸಿ ತುಮಕೂರು ಜಿಲ್ಲೆಯಲ್ಲಿ ವಿಶೇಷವಾಗಿ ತಮ್ಮ ಕ್ಷೇತ್ರ ಕೊರಟಗೆರೆಯಲ್ಲಿ ಲಿಂಗಾಯತ ಮತದಾರರನ್ನು ಸೆಳೆಯುವ ಲೆಕ್ಕಾಚಾರ ಹಾಕಿದ್ದ ಪರಮೇಶ್ವರ್ ಆಸೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊನೆ ಕ್ಷಣದಲ್ಲಿ ಶಾಕ್ ನೀಡಿರುವುದು ಪರಮೇಶ್ವರ್ ಮುನಿಸಿಗೆ ಕಾರಣ ಎನ್ನಲಾಗುತ್ತಿದೆ.ಪರಮೇಶ್ವರ್ ಮುನಿಸಿಗೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಅವರನ್ನೇ ಕೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Comments